ಮದ್ದೂರು ಪೇಟೆಬೀದಿ 100 ಅಡಿ ವಿಸ್ತರಣೆ

20M.D.R.4
ಮದ್ದೂರು ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಪುರಸಭಾ ಆಡಳಿತಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಮೀನಾಕ್ಷಿ, ಸಂದೀಪ್ ಇದ್ದರು.
Published on

ಮದ್ದೂರು: ಪಟ್ಟಣದ ಪೇಟೆಬೀದಿಯನ್ನು 100 ಅಡಿಗೆ ವಿಸ್ತರಿಸುವ ಸಂಬಂಧ ಪುರಸಭೆ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಶನಿವಾರ ಪುರಸಭಾ ಆಡಳಿತಾಧಿಕಾರಿ (ಉಪ ವಿಭಾಗಧಿಕಾರಿ) ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ನಿರ್ಧರಿಸಿ ಸದಸ್ಯರು ಒಪ್ಪಿಗೆ ಸೂಚಿಸಿದರು.


ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಬಂದಾಗ ಕೆಲ ಸದಸ್ಯರು 100 ಅಡಿ ಹಾಗೂ ಕೆಲವರು 120 ಅಡಿಗೆ ವಿಸ್ತರಿಸಬೇಕು ಎಂದು ಅಭಿಪ್ರಾಯ ಸೂಚಿಸಿದ್ದರ ಹಿನ್ನಲೆಯಲ್ಲಿ, ಶಾಸಕ ಕೆ.ಎಂ.ಉದಯ್ ಅವರು ಮಧ್ಯ ಪ್ರವೇಶಿಸಿ ಭವಿಷ್ಯದ ದೃಷ್ಟಿಯಿಂದ 120 ಅಡಿಗೆ ವಿಸ್ತರಣೆ ಮಾಡಿದರೆ ಪಟ್ಟಣದ ಅಭಿವೃದ್ಧಿಯಾಗುತ್ತದೆ. ಆದ್ದರಿಂದ, ಮುಂದಿನ ವಿಶೇಷ ಸಭೆಯಲ್ಲಿ ಈ ಬಗ್ಗೆ ತಿಳಿಸಲು ಹೇಳಿದ್ದರು, ಹೀಗಾಗಿ ವಿಶೇಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.


ಸುಸಜ್ಜಿತ ಹೂ, ತರಕಾರಿ ಹಾಗೂ ಮಾಂಸ, ಮೀನು ಮಾರುಕಟ್ಟೆಯನ್ನು ನಿರ್ಮಿಸುವ ಬಗ್ಗೆ ವಿಷಯ ಚರ್ಚೆಗೆ ಬಂದಾಗ ಸದಸ್ಯರು ನಿರ್ಮಿಸಲು ಒಪ್ಪಿಗೆ ಸೂಚಿಸಿದ ನಂತರ ಶಾಸಕ ಕೆ.ಎಂ.ಉದಯ್ ಮಾತನಾಡಿ, ಈ ಬಗ್ಗೆ ಸ್ಥಳವನ್ನು ಗೊತ್ತು ಮಾಡಿದ ನಂತರ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.


ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ಈ ಬಗ್ಗೆ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತಾರದೆ ಹಾಗೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯರಾದ ಪ್ರವೀಣ್, ಸುರೇಶ್, ಪ್ರಸನ್ನ, ಸಿದ್ದು, ಸಚ್ಚಿನ್, ತನುಜಾ, ವನಿತಾ, ಪ್ರಮೀಳಾ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಶಾಸಕ ಕೆ.ಎಂ. ಉದಯ್ ಮಾತನಾಡಿ, ಕೂಡಲೇ ಸಂಬಂಧಪಟ್ಟ ಪುರಸಭಾ ಸದಸ್ಯರನ್ನು ಕರೆಸಿಕೊಂಡು ಆಗಬೇಕಿರುವ ಕೆಲಸಗಳ ಬಗ್ಗೆ ಅವರಿಂದ ಮಾಹಿತಿ ಪಡೆದು ಗೊಂದಲ ಪರಿಹರಿಸಿ ಸಮರ್ಪಕ ಕಾಮಗಾರಿಯನ್ನು ನಡೆಸುವಂತೆ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಶಾಸಕ ಕದಲೂರು ಉದಯ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ, ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ, ಕೋಕಿಲಾ ಅರುಣ್, ಸರ್ವಮಂಗಳಾ, ಎಸ್.ಮಹೇಶ್, ಸುರೇಶ್, ಆದಿಲ್, ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net