

ಹಿರೇಕೆರೂರ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ತೆಗೆಸುವ ಕಾಮಗಾರಿ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಸೋಮವಾರ ಭೇಟಿ ನೀಡಿ, ಕಾರ್ಮಿಕರ ಅಹವಾಲು ಆಲಿಸಿದರು.
ಕಾರ್ಮಿಕರಿಗೆ ಕಡ್ಡಾಯವಾಗಿ 100 ದಿನ ಕೆಲಸ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುವರಿ ಮಾನವ ದಿನ ನೀಡಲು ಸರ್ಕಾರ ನಿರ್ಧರಿಸಿದ್ದು, ಕಾರ್ಮಿಕರಿಗೆ ಸಕಾಲಕ್ಕೆ ಕೆಲಸದ ಅನುಕೂಲ ಮಾಡಿಕೊಡಬೇಕು ಎಂದರು.
ತಾಲೂಕಿನ ಕಾರ್ಮಿಕರ ಸಭೆ ಕರೆಯುವಂತೆ ತಾಪಂ ಇಒ ಶಶಿಧರ ಎಚ್. ಅವರಿಗೆ ತಿಳಿಸಿದ ಶಾಸಕರು, ಇತ್ತೀಚೆಗೆ ಕಚವಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಕುಟುಂಬಕ್ಕೆ ಉದ್ಯೋಗ ಖಾತ್ರಿ ಅಡಿಯಲ್ಲಿ ಪರಿಹಾರ ಬಿಡುಗಡೆ ಮಾಡಲು ಜಿಪಂಗೆ ಪ್ರಸ್ತಾವನೆ ಸಲ್ಲಿಸಿ ಎಂದು
ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಲಲಿತವ್ವ ಬಾರ್ಕಿ, ಜಿಲ್ಲಾ ಕಾರ್ಮಿಕರ ಸಂಘಟನೆಯ ಮದಾರಸಾಬ್ ಹಿರೇಹಳ್ಳಿ, ಮಂಜು ಛಲವಾದಿ, ಕಮಲಮ್ಮ ಹರಿಜನ, ಶಾರೂಖಖಾನ್ ಪಠಾಣ, ಮೇಘಾ ಮೂಲಿಮನಿ, ಪಿಡಿಒ, ಗ್ರಾಪಂ ಸದಸ್ಯರು, ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು.