10 ತಿಂಗಳಲ್ಲಿ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ

12 yelandur 01
ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆಯನ್ನು ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಡಾ.ಎಲ್.ಹನುಮೇಗೌಡ, ಡಾ.ಶಿವಣ್ಣ, ಡಾ.ಎಸ್.ಶಿವರಾಜು ಪುಷ್ಪಾ, ರಾಧಾ, ಶಿವನಂಜಮ್ಮ ಇತರರು ಇದ್ದರು.
Published on

ಯಳಂದೂರು: ನಾನು ಶಾಸಕನಾಗಿ ಆಯ್ಕೆಯಾಗಿ 10 ತಿಂಗಳಾಗಿದ್ದು, ಈ ಅವಧಿಯಲ್ಲಿ 100 ಕೋಟಿ ರೂ.ಗೂ ಅಧಿಕ ಅನುದಾನವನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಂದಿರುವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.


ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಸೋಮವಾರ ನೂತನ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟರೂ ಆರ್ಥಿಕವಾಗಿ ಸದೃಢವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಸಮತೋಲನ ಕಾಪಾಡಿಕೊಂಡು ರಾಜ್ಯದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಯಳಂದೂರು ಪಟ್ಟಣದ 100 ಹಾಸಿಗೆಗಳ ಆಸ್ಪತ್ರೆಗೆ 40 ಕೋಟಿ ರೂ., ಬಿಳಿಗಿರಿರಂಗನಬೆಟ್ಟದ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಜತೆಗೆ 25 ಕೋಟಿ ರೂ. ವಿಶೇಷ ಅನುದಾನ ತರಲಾಗಿದೆ. ಇದರಲ್ಲಿ ಎಲ್ಲ ಜಾತಿ, ಧರ್ಮದವರ ಅಪೂರ್ಣಗೊಂಡ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು 12 ಕೋಟಿ ರೂ. ನೀಡಲಾಗಿದೆ. ಐಟಿಐ ಕಾಲೇಜು ಕಟ್ಟಡ, ವಿವೇಕ ಶಾಲೆ ಯೋಜನೆ, ಪಾಲಿಟೆಕ್ನಿಕ್ ಕಾಲೇಜು ಕಟ್ಟಡಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.


30 ವರ್ಷಗಳ ಬೇಡಿಕೆ ಈಡೇರಿಕೆ: 30 ವರ್ಷಗಳಿಂದಲೂ ತಾಲೂಕಿನ ಗೌಡಹಳ್ಳಿ ಗ್ರಾಮಕ್ಕೆ ಪಶು ಆಸ್ಪತ್ರೆ ಬೇಡಿಕೆ ಇತ್ತು. ಈಗ ಇದು ಈಡೇರಿದೆ. ಗೌಡಹಳ್ಳಿ ಬಿಆರ್‌ಟಿ ಹುಲಿ ಸಂರಕ್ಷಿತಾ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾಗಿದೆ. ನೂತನ ಆಸ್ಪತ್ರೆ ವ್ಯಾಪ್ತಿಯಲ್ಲಿ 3731 ಜಾನುವಾರುಗಳಿದ್ದು, ಅವುಗಳ ರಕ್ಷಣೆಗೆ ಆಸ್ಪತ್ರೆ ಅನುಕೂಲವಾಗಲಿದೆ ಎಂದರು.


ಪಶು ಇಲಾಖೆಯ ಉಪನಿರ್ದೇಶಕ ಡಾ.ಎಲ್.ಹನುಮೇಗೌಡ, ಸಹಾಯಕ ನಿರ್ದೇಶಕರಾದ ಡಾ.ಶಿವಣ್ಣ, ಡಾ.ಎಸ್.ಶಿವರಾಜು ಗ್ರಾಪಂ ಸದಸ್ಯರಾದ ಪುಷ್ಪಾ, ರಾಧಾ, ಶಿವನಂಜಮ್ಮ, ಶಾಂತಮಲ್ಲು, ಉಮೇಶ್, ಸೋಮಶೇಖರ್, ಸುಂದರ್, ಪಿಡಿಒ ರಮೇಶ್, ಎಚ್.ವಿ.ಚಂದ್ರು, ತೋಟೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ರಾಮಚಂದ್ರು, ಚೇತನ್ ದೊರೆರಾಜ್, ರಾಜು, ರವಿ, ನಾಗೇಶ್, ವಿಜಯ್, ಕಂದಹಳ್ಳಿ ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net