ಕೊಡವ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ರೂ. ಮೀಸಲಿಡಲು ಮನವಿ

SHIVA KUMAR
Published on

ಮಡಿಕೇರಿ: ರಾಜ್ಯ ಸರ್ಕಾರ ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದು ಸ್ವಾಗತಾರ್ಹ ಕ್ರಮವೆಂದು ಹರ್ಷ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಮುಖ್ಯಮಂತ್ರಿಗಳು ನಿಗಮಕ್ಕೆ ೧೦೦ ಕೋಟಿ ರೂ. ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವರ ಅನೇಕ ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಈಡೇರಿಸಿದ್ದಾರೆ. ಅವರಿಗೆ ನಾವು ಚಿರಋಣಿಗಳಾಗಿದ್ದೇವೆ, ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಇರುವ ನಿಗಮಕ್ಕೆ ೧೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.


ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆ ನಿಗಮ ಸ್ಥಾಪನೆಯ ಬೇಡಿಕೆ ಇಟ್ಟಾಗ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯರವರ ನೇತೃತ್ವದಲ್ಲಿ ತಾವು ಸೇರಿದಂತೆ ಅನೇಕರು ಬೆಳಗಾವಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಅಂದು ಸಿಎಂ ನೀಡಿದ ಭರವಸೆ ಇಂದು ಈಡೇರಿದ್ದು, ಶಾಸಕ ಕೆ.ಜಿ.ಬೋಪಯ್ಯ, ಯುಕೊ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪರವರುಗಳು ಅಭಿನಂದನಾರ್ಹರು ಎಂದು ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net