

ಮಂಗಳೂರು: ಉಳ್ಳಾಲ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದ ರಸ್ತೆ ಅಭಿವೃದ್ಧಿಗೆ ತಲಾ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ, ಜತೆಗೆ ಉಳ್ಳಾಲದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆಂದು ಒಟ್ಟು 100 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ಗ್ರಾಮಗಳಿಗೆ ಇನ್ನಷ್ಟು ಅನುದಾನ ತರಲಾಗುವುದು. ಉಳ್ಳಾಲಕ್ಕೆ ಅಗ್ನಿಶಾಮಕ ಘಟಕ ಚುನಾವಣೆ ವೇಳೆ ಉಳ್ಳಾಲ ಜನರ ಬೇಡಿಕೆಯಂತೆ ಅಗ್ನಿಶಾಮಕ ಘಟಕ ಮಂಜೂರಾಗಿದೆ. ಜೀರಿನಲ್ಲಿ 2 ಎಕರೆ ಜಾಗವನ್ನು ಅದಕ್ಕಾಗಿ ಗುರುತಿಸಲಾಗಿದ್ದು, 9 ಕೋ.ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಸೇರಿ ಇತರ ಪ್ರಕ್ರಿಯೆ ಶುರುವಾಗಲಿದೆ ಎಂದರು.
ತೊಕ್ಕೊಟ್ಟಿನಲ್ಲಿ 33 ಕೆವಿ ಸಬ್ ಸ್ಟೇಶನ್‌ನಿಂದ 132 ಕೆವಿ ಸಬ್‌ಸ್ಟೇಶನ್‌ಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಈಗಾಗಲೇ ಅನುಮೋದನೆ ದೊರಕಿದೆ. ಉಳ್ಳಾಲದಲ್ಲಿ ಸಂಪೂರ್ಣ ಭೂಗತ ಕೇಬಲ್ ಅಳವಡಿಸಲು 200 ಕೋಟಿ ರೂ. ಅನುದಾನ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಉಳ್ಳಾಲ ನಗರಾದ್ಯಂತ ವಿದ್ಯುತ್ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆಯಾಗಲಿದೆ. ಪ್ರಸ್ತುತ ಕಾವೂರಿನಿಂದ ಕೊಣಾಜೆ ಮೂಲಕ ಉಳ್ಳಾಲಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ. ಮುಂದೆ ಮಂಗಳೂರಿನಿಂದ ನೇರವಾಗಿ ಭೂಗತ ಕೇಬಲ್ ಮೂಲಕ ವಿದ್ಯುತ್ ಮಾರ್ಗ ರಚನೆ ಮಾಡಲಾಗುತ್ತದೆ ಎಂದರು.