

ಹುಬ್ಬಳ್ಳಿ: ಬಾಕಿ ಬಿಲ್ ಪಾವತಿ ಹಾಗೂ ಟೆಂಡರ್‌ಗೆ ಮೀಸಲಿಟ್ಟಿರುವುದು ಸೇರಿ ಒಟ್ಟು 100 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ನಗರದ ಪಾಲಿಕೆ ಕಚೇರಿ ಮುಂದೆ ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಸಾಮಾನ್ಯನಿಧಿಯಡಿ ಮುಕ್ತಾಯಗೊಂಡಿರುವ ಕಾಮಗಾರಿಯ ಬಿಲ್ ಅನ್ನು ಪಾಲಿಕೆ ಆಯುಕ್ತರು ಬಿಡುಗಡೆ ಮಾಡಬೇಕು. ಗುತ್ತಿಗೆದಾರರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಕೂಡಲೇ ಎಲ್ಲ ವಿಭಾಗಗಳ ಇಂಜಿನಿಯರ್‌ಗಳ ನೇತೃತ್ವದಲ್ಲಿ ಕುಂದುಕೊರತೆ ಸಭೆ ನಡೆಸಬೇಕು. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಸೇರಿಸಿ ಪಾಲಿಸಿ ಸಿದ್ಧಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.
ಅಧ್ಯಕ್ಷ ಮೋಹನ ಗೌಡರ, ಪ್ರಧಾನ ಕಾರ್ಯದರ್ಶಿ ಐ.ಎ. ಪಂಪಣ್ಣ, ಪದಾಧಿಕಾರಿಗಳಾದ ಧರ್ಮಣ್ಣ ಕುರಿ, ವಸೀಮ್ ಸನದಿ, ವಿವೇಕಾನಂದ ಭೋವಿ, ಪ್ರಶಾಂತ ಅಣ್ಣಿಗೇರಿ, ಜಾವೀದ ಕೊಪ್ಪಳ, ಶಶಿಧರ ಚಟ್ನಿ ಇತರರು ಭಾಗವಹಿಸಿದ್ದರು.