

ಲಿಂಗಸುಗೂರು: ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎಂದು ರಾಜು ಕಾಗೆ, ಬಿ.ಆರ್. ಪಾಟೀಲ್ ಸೇರಿದಂತೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಅವರಿಗೂ ಹಣ ತರಲು ಸಾಧ್ಯವಾಗಿಲ್ಲ. ಮುತುವರ್ಜಿ ವಹಿಸಿ 100 ಕೋಟಿ ರೂ. ಅನುದಾನ ತಂದರೆ ಇಬ್ಬರು ಬಿಜೆಪಿ ಮಂಡಲ ಅಧ್ಯಕ್ಷರ ನೇತೃತ್ವದಲ್ಲಿ ಪಟ್ಟಣದ ಗಡಿಯಾರ ಸರ್ಕಲ್‌ನಲ್ಲಿ ಸನ್ಮಾನ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಶಾಸಕರಿಗೆ 25 ಕೋಟಿ ರೂ., ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪಕ್ಷ ಭೇದ ಮರೆತು ಅನುದಾನ ಬಿಡುಗಡೆ ಮಾಡಿತ್ತು. ಈ ಬಗ್ಗೆ ಡಿ.ಎಸ್. ಹೂಲಗೇರಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಲಿಂಗಸುಗೂರು ಪಟ್ಟಣಕ್ಕೆ ಮಂಜೂರಾಗಿದ್ದ 200 ಬೆಡ್ ಆಸ್ಪತ್ರೆ ನೀಡುವಂತೆ ಸದನದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರು ಬೇಡಿಕೊಂಡರೂ ಸರ್ಕಾರ ಕಿವಿಗೊಡಲಿಲ್ಲ. 2022ರಲ್ಲಿ 200 ಬೆಡ್ ಆಸ್ಪತ್ರೆ ಮಂಜೂರು ಆಗಿತ್ತು ಎನ್ನುವ ಹೂಲಗೇರಿ ಅವರು ದಾಖಲೆ ಕೊಡಲಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುದಗಲ್ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಗಿರಿಮಲ್ಲನಗೌಡ ಕರಡಕಲ್ಲ, ಅಯ್ಯಪ್ಪ ಮಾಳೂರು ವಕೀಲ, ಮುದುಕಪ್ಪ ನಾಯಕ, ರಾಜು ಚವ್ಹಾಣ್, ಭೀಮಣ್ಣ ಹಿರೇಮನಿ ಇದ್ದರು.