

ಬೆಳಗಾವಿ: ಅಶೋಕ ನಗರದ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ)ಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಭೇಟಿ ನೀಡಿ, ಅಲ್ಲಿಯ ವ್ಯವಸ್ಥೆ ಪರಿಶೀಲಿಸಿದರು.
ತುರ್ತುಸೇವೆ, ಎಲುವು-ಕೀಲು, ಔಷಧ ಸೇರಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ನಿರ್ಮಾಣಗೊಂಡ 25 ವರ್ಷಕ್ಕೆ ಕಟ್ಟಡ ಇಷ್ಟೊಂದು ಬೀಳುವ ಹಂತಕ್ಕೆ ತಲುಪಿದ್ದು ಏಕೆ? ಇದನ್ನು ನಿರ್ಮಿಸಿದ್ದು ಮತ್ತು ಈಗ ನಿರ್ವಹಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದರು. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ನಗರದದಲ್ಲಿ 1998ರಲ್ಲಿ ಕಟ್ಟಿದ್ದ ಇಎಸ್‌ಐ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದೆ. 152 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣಕ್ಕೆ ಕರೆದಿರುವ ಟೆಂಡರ್‌ಗೆ ಅನುಮೋದನೆಯೂ ಸಿಕ್ಕಿದೆ ಎಂದರು.
ಈಗಿರುವ ಸ್ಥಳದಲ್ಲೇ ಆಸ್ಪತ್ರೆ ನಿರ್ಮಿಸಿದರೆ ಮೂರು ಎಕರೆ ಜಾಗ ಸಿಗುತ್ತದೆ. ಆದರೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಮಚ್ಚೆ, ಉದ್ಯಮಬಾಗ ಪ್ರದೇಶಗಳ ಕೈಗಾರಿಕೆಗಳಲ್ಲೇ ಕಾರ್ಮಿಕರು ಹೆಚ್ಚಿದ್ದಾರೆ. ಚಿಕಿತ್ಸೆಗಾಗಿ 15 ಕಿ.ಮೀ ದೂರದಿಂದ ಅಶೋಕ ನಗರಕ್ಕೆ ಬರಲು ಅವರಿಗೆ ಕಷ್ಟವಾಗುತ್ತಿದೆ. ಹಾಗಾಗಿ ಆ ಭಾಗದಲ್ಲೇ ಆಸ್ಪತ್ರೆ ನಿರ್ಮಿಸುವಂತೆ ಶಾಸಕರು ಕೋರಿದ್ದಾರೆ. ಆ ಬಗ್ಗೆಯೂ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಸದ್ಯ ಇರುವ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ಸಣ್ಣಪುಟ್ಟ ಚಿಕಿತ್ಸೆಯಷ್ಟೇ ಸಿಗುತ್ತಿದೆ. ಇಲ್ಲಿಂದ ಬೇರೆ ಬೇರೆ ಆಸ್ಪತ್ರೆಗಳಿಗೆ ಅವರನ್ನು ಕಳುಹಿಸಲಾಗುತ್ತಿದೆ. ಆಯುಷ್ಮಾನ್ ಕರ್ನಾಟಕ ಯೋಜನೆಗೆ ಒಳಪಟ್ಟಿರುವ ಆಸ್ಪತ್ರೆಗಳಲ್ಲಿ ಇಎಸ್‌ಐ ಚೀಟಿದಾರರಿಗೂ ಉಚಿತವಾಗಿ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಲಾಗುವುದು. ಇಎಸ್‌ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು. ಬೆಳಗಾವಿಯಲ್ಲಿ ಹೆಚ್ಚಿನ ಕೈಗಾರಿಕಾ ಪ್ರದೇಶಗಳಿವೆ. ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಸೇವೆಗಾಗಿ ಸುಸಜ್ಜಿತ ಆಸ್ಪತ್ರೆ ಕಟ್ಟಲು ಕೇಂದ್ರ ಸರ್ಕಾರ ಬದ್ಧವಿದೆ. ಮೂರುವರೆ ಲಕ್ಷ ಇಎಸ್‌ಐ ಚೀಟಿದಾರರು ಇದ್ದಾರೆ ಎಂದು ತಿಳಿಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಇತರರಿದ್ದರು.