

ಧಾರವಾಡ: ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಪ್ರತಿದಿನ 200 ಕ್ಕಿಂತ ಹೆಚ್ಚು ಕರೊನಾ ಸೋಂಕು ಪ್ರಕರಣ ಕಂಡು ಬರುತ್ತಿದ್ದು, ಇದೇ ರೀತಿಯಲ್ಲಿ ಮುಂದುವರಿದರೆ ಇನ್ನು ಮೂರೇ ದಿನದಲ್ಲಿ ಒಟ್ಟು ಪ್ರಕರಣ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ!
ಚೀನಿ ವೈರಸ್ ವಿಷಯದಲ್ಲಿ ಜನರು ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರುವ ಅನಿವಾರ್ಯತೆಯನ್ನು ಅಂಕಿ ಅಂಶಗಳು ಸಾರಿ ಹೇಳುತ್ತಿವೆ. ಸೋಮವಾರ 221 ಕರೊನಾ ಪ್ರಕರಣ ಗಳು ಕಂಡುಬಂದಿವೆ. ಇದರಿಂದ ಒಟ್ಟು ಪಾಸಿಟಿವ್ ಪ್ರಕರಣ ಸಂಖ್ಯೆ 9463 ಆಗಿದೆ. 223 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೇತರಿಸಿಕೊಂಡವರ ಒಟ್ಟು ಸಂಖ್ಯೆ 6764ಕ್ಕೇರಿದೆ. 2426 ಪ್ರಕರಣಗಳು ಸಕ್ರಿಯವಾಗಿವೆ. 68 ಜನರು ತೀವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರೊನಾದಿಂದ ಮತ್ತೆ ಇಬ್ಬರು ಮೃತಟ್ಟಿದ್ದಾರೆ. ಇದರಿಂದಾಗಿ, ಸಾವಿಗೀಡಾದವರ ಒಟ್ಟು ಸಂಖ್ಯೆ 273ಕ್ಕೇರಿದೆ. ಸೋಮವಾರದ ಪ್ರಯೋಗಾಲಯ ವರದಿಯಲ್ಲಿ ಸಹ ಹುಬ್ಬಳ್ಳಿ ನಗರದಲ್ಲೇ ಯಲ್ಲೇ ಅತಿ ಹೆಚ್ಚು ಪ್ರಕರಣ ಕಂಡುಬಂದಿದೆ. ಹುಬ್ಬಳ್ಳಿ ಶಹರ ಮತ್ತು ಗ್ರಾಮಾಂತರ ತಾಲೂಕು ಸೇರಿ 47 ಸ್ಥಳಗಳಲ್ಲಿ; ಧಾರವಾಡ ಶಹರ ಮತ್ತು ಗ್ರಾಮೀಣ ಸೇರಿ 45ರಷ್ಟು ಪ್ರದೇಶದಲ್ಲಿ ಸೋಂಕಿತರು ಕಂಡುಬಂದಿದ್ದಾರೆ.
ಕಲಘಟಗಿ ತಾಲೂಕಿನ 7 ಕಡೆ, ನವಲಗುಂದ ತಾಲೂಕಿನ 8, ಕುಂದಗೋಳ ತಾಲೂಕಿನ 7, ಅಣ್ಣಿಗೇರಿ ತಾಲೂಕಿನ 2 ಪ್ರದೇಶಗಳಲ್ಲಿ ಪ್ರಕರಣ ಪತ್ತೆಯಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ 20ರಷ್ಟು ಪ್ರಕರಣ ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.