

ಕಂಪ್ಲಿ: ವಿಮುಕ್ತ ದೇವದಾಸಿಯರ ಸಮೀಕ್ಷೆ ನಡೆಸಬೇಕು ಹಾಗೂ ಅವರ ಮಕ್ಕಳಿಗೆ ಉದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ಸಮಿತಿ ತಾಲೂಕು ಅಧ್ಯಕ್ಷ ರಾಮ ಮಾತನಾಡಿ, ವಿಮುಕ್ತ ದೇವದಾಸಿಯರ ಮಕ್ಕಳ ಶಿಕ್ಷಣಕ್ಕೆ ತಕ್ಕ ಉದ್ಯೋಗ ದೊರೆಯುತ್ತಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಯುವ ನಿಧಿ ಯೋಜನೆಯಡಿ ವಿಮುಕ್ತ ದೇವದಾಸಿಯರ ಮಕ್ಕಳಿಗೆ ಕನಿಷ್ಠ 10 ಸಾವಿರ ರೂ. ಭತ್ಯೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ, ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ, ಕಾರ್ಯದರ್ಶಿ ನೀಲಪ್ಪ, ಪದಾಧಿಕಾರಿಗಳಾದ ರಮೇಶ್, ಎ.ಸ್ವಾಮಿ, ಪರಶುರಾಮ, ರೇಣುಕಾ, ಪಾರ್ವತಿ, ಶಿವಲಿಂಗಮ್ಮ ಇತರರಿದ್ದರು.