10 ಸಾವಿರ ಮನೆಗಳಿಗೆ ಇ-ಖಾತೆ ಭರವಸೆ

ldh mla
ಹುಣಸೆಬೈಲು ತಾಂಡದ 56 ಮಂದಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಮನೆಯ ತಾತ್ಕಾಲಿಕ ಹಕ್ಕುಪತ್ರಗಳನ್ನು ವಿತರಿಸಿದರು. ತಣಿಗೆಬೈಲು ರಮೇಶ್ ಗೋವಿಂದೇಗೌಡ, ಎಸ್.ಕೆ.ರಮೇಶ್ ಇತರರಿದ್ದರು.
Published on

ಲಿಂಗದಹಳ್ಳಿ: ತರೀಕೆರೆ ವಿಧಾನಸಭಾ ವ್ಯಾಪ್ತಿಯ ಸುಮಾರು 10 ಸಾವಿರ ಮನೆಗಳಿಗೆ ಹಕ್ಕುಪತ್ರ ನೀಡಿ ಇ-ಖಾತೆಗಳನ್ನು ಮಾಡಿಸಿಕೊಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಹುಣಸೆಬೈಲು ತಾಂಡಾದ 56 ಮನೆಗಳಿಗೆ ತಾತ್ಕಾಲಿಕ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮ ಮತ್ತು ಉಪ ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ವಿಧಾನಸಭೆಯಲ್ಲಿ ಮತ್ತು ಮುಖ್ಯಮಂತ್ರಿ, ಕಂದಾಯ ಸಚಿವರು ಸೇರಿದಂತೆ ಸಂಬಂಧಪಟ್ಟವರ ಬಳಿ ಅನೇಕ ಭಾರಿ ಪ್ರಸ್ತಾಪ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ತಾಂಡಾ, ಹಟ್ಟಿ, ಹಾಡ್ಯ ಮುಂತಾದವುಗಳು ಕಂದಾಯ ಗ್ರಾಮಗಳಾಗಲಿವೆ ಎಂದು ಹೇಳಿದರು.

ಕಂದಾಯ ಇಲಾಖೆಯಿಂದ ಹುಣಸೆಬೈಲು ಗ್ರಾಮದ 56 ಫಲಾನುಭವಿಗಳಿಗೆ ತಾತ್ಕಾಲಿಕ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ತಾತ್ಕಾಲಿಕ ಹಕ್ಕುಪತ್ರ ಪಡೆದವರೆಲ್ಲರೂ ಸಂಬಂಧಪಟ್ಟ ಬ್ಯಾಂಕಿನಲ್ಲಿ ಸಾಂಕೇತಿಕವಾಗಿ ಸರ್ಕಾರ ನಿಗದಿಪಡಿಸಿರುವ ಹಣ ತುಂಬಿ ಹಣ ಕಟ್ಟಿದ ಚಲನ್ ಮತ್ತು ತಾತ್ಕಾಲಿಕ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿದರೆ ಮುಂದಿನ ಕೆಲವೇ ದಿನಗಳಲ್ಲಿ 94(ಸಿ) ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮಾತನಾಡಿ, ಶಾಸಕರು ಚುನಾವಣಾ ಸಂದರ್ಭದಲ್ಲಿ ಹುಣಸೆಬೈಲು ಗ್ರಾಮಸ್ಥರಿಗೆ ನೀಡಿದ್ದ ದೇವಸ್ಥಾನದ ಅಭಿವೃದ್ಧಿಗೆ ಅನುದಾನ, ಗ್ರಾಮಕ್ಕೆ ರಸ್ತೆ ಸಂಪರ್ಕ, ಅಂಗನವಾಡಿ ಕಟ್ಟಡ, ಗ್ರಾಮದ ಬಳಿ ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

ಕಂದಾಯ ಅಧಿಕಾರಿ ಎಸ್.ಕೆ.ರಮೇಶ್, ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್, ನಿವೃತ್ತ ಕೃಷಿ ಅಧಿಕಾರಿ ಆರ್. ಸತ್ಯಪ್ಪ, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಉಪಾಧ್ಯಕ್ಷೆ ತಂಗಾಬಾಯಿ ಗಂಗನಾಯ್ಕ, ಪಿಡಿಒ ಎನ್.ಎಸ್. ನಾಗರಾಜಪ್ಪ, ಎನ್.ಎ.ಕೃಷ್ಣನಾಯ್ಕ, ಅನ್ನಪೂರ್ಣ ಮಂಜುನಾಥ್, ವಾಲ್ಯನಾಯ್ಕ, ಪ್ರಕಾಶ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net