10 ಲಕ್ಷ ರೂ. ವಿಶೇಷ ಪರಿಹಾರ ಘೋಷಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

10 ಲಕ್ಷ ರೂ. ವಿಶೇಷ ಪರಿಹಾರ ಘೋಷಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
Published on

ಹಾಸನ: ಇತ್ತೀಚೆಗೆ ಆನೆ ಕಾರ್ಯಾಚರಣೆಯ ವೇಳೆ ಮೃತಪಟ್ಟ ಶಾರ್ಪ್ ಶೂಟರ್ ಎಚ್.ಎಚ್. ವೆಂಕಟೇಶ್ ಅವರ ಕುಟುಂಬಕ್ಕೆ ಅರಣ್ಯ ಪ್ರತಿಷ್ಠಾನದ ವತಿಯಿಂದ 10 ಲಕ್ಷ ರೂ. ವಿಶೇಷ ಪರಿಹಾರ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಘೋಷಿಸಿದರು.

ಆಲೂರು ತಾಲೂಕು ಹೊನ್ನವಳ್ಳಿಯಲ್ಲಿರುವ ವೆಂಕಟೇಶ್ ಅವರ ಮನೆಗೆ ಬುಧವಾರ ಭೇಟಿ ನೀಡಿದ ಸಚಿವರು, ಮೃತ ವೆಂಕಟೇಶ್ ಅವರ ಪತ್ನಿ ಜಿ.ಎಸ್. ಮಂಜುಳಾ ಮತ್ತು ಪುತ್ರರಾದ ಮೋಹಿತ್ ಮತ್ತು ಮಿಥುನ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ವೆಂಕಟೇಶ್ ಅವರು ತಮ್ಮ ಅದ್ಭುತ ಕಾರ್ಯದಿಂದ ಆನೆ ವೆಂಕಟೇಶ್ ಎಂದೇ ಖ್ಯಾತರಾಗಿದ್ದರು. ಶಾರ್ಪ್ ಶೂಟರ್ ವೆಂಕಟೇಶ್ ಅವರ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ನಿಮ್ಮ ಈ ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ ಎಂದು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಡಾನೆ ದಾಳಿಯಿಂದ ಮೃತಪಟ್ಟ ವೆಂಕಟೇಶ್ ಕುಟುಂಬಕ್ಕೆ ಈಗಾಗಲೇ 15 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಜತೆಗೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚುವರಿಯಾಗಿ 10 ಲಕ್ಷ ರೂ. ಪರಿಹಾರವನ್ನು ಒಂದು ವಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಆಗಮಿಸಿ ಕುಟುಂಬಕ್ಕೆ ನೀಡಲಿದ್ದಾರೆ ಎಂದು ತಿಳಿಸಿದರು.

ವೆಂಕಟೇಶ್ ಅವರು ರಾಜ್ಯದಲ್ಲಿ ಅಲ್ಲದೆ, ನೆರೆ ರಾಜ್ಯದಲ್ಲಿಯೂ ಸಹ ಆನೆ ಸೆರೆ ಕಾರ್ಯಾಚರಣೆ ಸೇರಿದಂತೆ ಅರಣ್ಯ ಇಲಾಖೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಅನುಮತಿಗೆ ಶಿಫಾರಸ್ಸು ಮಾಡುವುದಾಗಿ ಸಚಿವರು ಹೇಳಿದರು.

ಆನೆಗಳ ದಾಳಿಯಿಂದ ಬೆಳೆ ಹಾನಿ ಮತ್ತು ಜೀವ ಹಾನಿ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊಡಗು, ಹಾಸನ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಆನೆ ಸಮಸ್ಯೆ ಇರುವ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲು ಸಭೆ ಕರೆಯಲಾಗುವುದು. ಆನೆಗಳು ನಾಡಿಗೆ ಬಾರದಂತೆ ತಡೆಯಲು ಆನೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ರೈಲ್ವೆ ಹಳಿಗಳ ಲಭ್ಯತೆಯೂ ಕಡಿಮೆ ಇದೆ. ಹೀಗಾಗಿ ಕೇವಲ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಾಧ್ಯವಾಗಿದೆ. ಇನ್ನೂ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ. ಅದೇ ರೀತಿ ಕೆಲ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಆನೆ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಜತೆಗೆ ಸೌರ ವಿದ್ಯುತ್ ತಂತಿ ಬೇಲಿ ಹಾಕಲಾಗುತ್ತಿದೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೇಂದ್ರ ಸರ್ಕಾರ ಸಂಜಯ್ ಕುಮಾರ್ ಸಮಿತಿ ರಚಿಸಿ ವರದಿಯ ಪರಾಮರ್ಶೆ ನಡೆಸುತ್ತಿದೆ. ಕಸ್ತೂರಿ ರಂಗನ್ ವರದಿ 11 ವರ್ಷದಷ್ಟು ಹಳೆಯದಾಗಿದೆ. ಸಂಜಯ್ ಕುಮಾರ್ ಸಮಿತಿ ತಮ್ಮನ್ನು ಭೇಟಿ ಮಾಡಿದಾಗ, ಪಶ್ಚಿಮ ಘಟ್ಟ ಪ್ರದೇಶದ ಸಾವಿರ್ವಜನಿಕರು, ಜನಪ್ರತಿನಿದಿಗಳು ಹಾಗೂ ಪರಿಸರವಾದಿಗಳೊಂದಿಗೆ ಸಮಾಲೋಚಿಸಿ ಸಮಗ್ರ ತಿದ್ದುಪಡಿ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದ್ದು, ಅವರು ವರದಿ ನೀಡಿದ ತರುವಾಯ ಸಚಿವ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಿ ಅದರ ಜಾರಿ ಕುರಿತಂತೆ ಸಾದಕ- ಬಾದಕ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಶೃತಿ, ತಹಸೀಲ್ದಾರ್ ಮಮತಾ ಸೇರಿದಂತೆ ಉಪ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net