

ಚಿತ್ರದುರ್ಗ: ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು, ವಾಣಿಜ್ಯ ಸಂಸ್ಥೆಗಳು, ಕೆಎಸ್‌ಆರ್‌ಟಿಸಿ, ಸರ್ಕಾರದ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ವದಂತಿ ನಂಬದೆ, 10 ರೂ. ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಿ, ಚಲಾವಣೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸೂಚನೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿ 10 ರೂ. ನಾಣ್ಯ ಬಸ್‌ಗಳಲ್ಲಿ ಪ್ರಯಾಣಿಕರಿಂದ ಸ್ವೀಕರಿಸುತ್ತಿಲ್ಲ ಎಂಬ ದೂರು ಕೇಳಿಬಂದಿತ್ತು. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ಜರುಗಿಸುವಂತೆ ಸೂಚಿಸಿತ್ತು. ಈಚೆಗೆ ರಾಜ್ಯಮಟ್ಟದ ಬ್ಯಾಂಕರ್‌ಗಳ ಸ್ಟೀರಿಂಗ್ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ) ಸರ್ಕಾರದ ಕಾರ್ಯದರ್ಶಿ ಏಕ್‌ರೂಪ್ ಕೌರ್ ಅವರು 10 ರೂ. ನಾಣ್ಯ ಎಲ್ಲರೂ ಸ್ವೀಕರಿಸಿ, ಚಲಾವಣೆಗೊಳಿಸಲು ಜಾಗೃತಿ ಮೂಡಿಸುವಂತೆ ಸೂಚಿಸಿದ್ದಾರೆ. ಎಲ್ಲರೂ ತಮ್ಮ ಅನುಮಾನ ಬದಿಗಿಟ್ಟು 10 ರೂ. ನಾಣ್ಯ ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಎಂದು ಡಿಸಿ ತಿಳಿಸಿದ್ದಾರೆ.