

ಮೈಸೂರು: ಬಿಜೆಪಿ, ಜೆಡಿಎಸ್ ಪಕ್ಷ ತೊರೆದು 10 ರಿಂದ 15 ಜನ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್ ಸೇರುವುದು ಖಚಿತ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ಪಕ್ಷ ಸೇರ್ಪಡೆ ಕುರಿತು ಎಲ್ಲರ ಜತೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಈ ಹಂತದಲ್ಲಿ ಅವರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಜೂನ್ ಮತ್ತು ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿದೆ. ಶೇ.60ರಷ್ಟು ಬರ ಇದ್ದರೆ ಮಾತ್ರ ಕೇಂದ್ರ ಅನುದಾದ ಬಿಡುಗಡೆ ಮಾಡುತ್ತದೆ. ಇದನ್ನು ಶೇ.30ಕ್ಕೆ ಇಳಿಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಕೇಂದ್ರದಿಂದ ಉತ್ತರ ಬಂದಿಲ್ಲ. ಕೇಂದ್ರದಿಂದ ವಿಶೇಷ ಅನುದಾನ ಕೇಳಿಲ್ಲ ಎಂದು ಹೇಳಿದರು.
ಬರ ಪರಿಹಾರ ಘೋಷಣೆಯನ್ನು ಶೇ.30 ಇಳಿಸುವ ಬಗ್ಗೆ ಉತ್ತರ ಬಂದ ನಂತರ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ. ಕಮಿಟಿ ಮೀಟಿಂಗ್‌ನಲ್ಲಿ ಬರ, ನೀರಿನ ಪರಿಸ್ಥಿತಿಯ ವರದಿಯನ್ನು ಅಧಿಕಾರಿಗಳ ಬಳಿ ಕೇಳಿದ್ದೇವೆ ಎಂದು ಹೇಳಿದರು.
ಬಾಯಿ ಚಪಲಕ್ಕಾಗಿ ಆರೋಪ: ಕೆಲಸ ಇಲ್ಲದವರು ಬಾಯಿ ಚಪಲಕ್ಕಾಗಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಗುತ್ತಿಗೆದಾರರಿಗೆ ಹಣವನ್ನೇ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಬಂದು ಕೆಲ ತಿಂಗಳು ಮಾತ್ರ ಆಗಿದೆ. ಒಂದೇ ಬಾರಿಗೆ 2.5 ಲಕ್ಷ ಕೋಟಿ ರೂ. ಕೊಡಲು ಆಗುತ್ತದೆಯೇ? ಹಂತ ಹಂತವಾಗಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.