10 ದಿನವಾದರೂ ಪತ್ತೆಯಾಗದ ಶವ: ಎನ್‌ಡಿಆರ್‌ಎಫ್ ತಂಡ ದೌಡು

drowned-in-river1650805670
Published on

ಮೈಸೂರು: ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ವಿದ್ಯಾರ್ಥಿಯ ಶವ ಪತ್ತೆಗೆ ಎನ್‌ಡಿಆರ್‌ಎಫ್ ತಂಡ ದೌಡಾಯಿಸಿದ್ದು, ಶುಕ್ರವಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.


ತಿ.ನರಸೀಪುರ ತಾಲೂಕಿನ ತಲಕಾಡು ವ್ಯಾಪ್ತಿಯ ಕಾವೇರಿ ನಿಸರ್ಗಧಾಮದಲ್ಲಿ ಆ.15ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನವಾರ ತಾಲೂಕಿನ ಹಡಿನಬಾಳು ಗ್ರಾಮದ, ಇಂಜಿನಿಯರಿಂಗ್ ವಿದ್ಯಾರ್ಥಿ ಅಮಿತ್(25) ತನ್ನ ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ನದಿಯಲ್ಲಿ ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.


ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯವನ್ನು ಜಿಲ್ಲೆಯ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ತಂಡದ ನುರಿತ ಈಜುಗಾರರಿಂದ ಪತ್ತೆಯ ಸಲುವಾಗಿ ಸತತ ಪ್ರಯತ್ನ ನಡೆಸಲಾಗಿತ್ತು. ಡ್ರೋನ್ ಮುಖಾಂತರ ಇತರ ಕಾರ್ಯಚರಣೆ ಮಾಡಿದ್ದರೂ ಪತ್ತೆಯಾಗಿರಲಿಲ್ಲ.


ಆದ್ದರಿಂದ ಶವ ಪತ್ತೆಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ತಂಡದವರ ನೆರವು ಕೋರಿದ್ದು, ಶುಕ್ರವಾರ ಎನ್‌ಡಿಆರ್‌ಎಫ್ ತುಕಡಿಯ 20 ಯೋಧರು ಹಾಗೂ ಕೊಡಗು ಜಿಲ್ಲೆಯ ಪೊಲೀಸ್ ತಂಡ ಕಾವೇರಿ ನಿಸರ್ಗಧಾಮಕ್ಕೆ ಬಂದಿದ್ದು, ಈ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ಘಟಕದ ನುರಿತ ಈಜುಗಾರರು ಇದ್ದಾರೆ. ಇದಕ್ಕೆ ಎನ್‌ಡಿಆರ್‌ಎಫ್ ತಂಡಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ತಂಡವೂ ಸಹಕಾರ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net