10 ಗುಂಟೆ ಜಾಗದಲ್ಲಿ ಧೋಬಿ ಘಾಟ್

04 CRP 01
ಚನ್ನರಾಯಪಟ್ಟಣ ಕೋಟೆಯ ಮಡಿವಾಳರ ಬೀದಿಯಲ್ಲಿ ತಾಲೂಕು ಮಡಿವಾಳರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತೋತ್ಸವದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನುಅಭಿನಂದಿಸಲಾಯಿತು.ಬಿ.ಎಂ.ಗೋವಿಂದರಾಜು, ರೇಖಾ ಅನಿಲ್, ಲಕ್ಷ್ಮಿ ವೆಂಕಟೇಶ್, ಬನಶಂಕರಿ ರಘು, ಮೋಹನ್, ನವೀನ್, ಮಂಜಣ್ಣ, ಅನಿಲ್ ಮರಗೂರ್, ಪ್ರಸನ್ನಕುಮಾರ್, ಸಿ.ಜೆ.ಮಂಜುನಾಥ್, ಧರ್ಮರಾಜ್, ಬಿ.ನಾಗರಾಜು, ಸಿ.ಜೆ.ನಟರಾಜು ಇದ್ದರು.
Published on

ಚನ್ನರಾಯಪಟ್ಟಣ: ಮಡಿವಾಳ ಜನಾಂಗ ಹಾಗೂ ಪಟ್ಟಣದ ಎಲ್ಲ ನಾಗರಿಕರ ಅನುಕೂಲಕ್ಕಾಗಿ ಪಟ್ಟಣದ ಅಮಾನಿಕೆರೆ ಪಕ್ಕದಲ್ಲಿ 10 ಗುಂಟೆ ಜಾಗ ಗುರುತಿಸಿ ವ್ಯವಸ್ಥಿತವಾದ ಧೋಬಿ ಘಾಟ್ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಕೋಟೆಯ ಮಡಿವಾಳರ ಬೀದಿಯಲ್ಲಿ ತಾಲೂಕು ಮಡಿವಾಳರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ ಹಾಗೂ ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ, ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು. ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು, ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಿಂದ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದಾಗ ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದರು ಎಂದು ತಿಳಿಸಿದರು.

ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದದ್ದು. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸ್ವಚ್ಛವಾದಂತಹ ಸಮಾಜಕ್ಕೆ ಆದ್ಯತೆ ನೀಡುವ ಸಮಾಜ ಇದ್ದರೆ ಅದು ಮಡಿವಾಳ. ಕಾರ್ಯಚಟುವಟಿಕೆಗಳ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ 3.5 ಗುಂಟೆ ನಿವೇಶನ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ಮಡಿವಾಳ ಸಮಾಜದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕರಿಸಿದ್ದು ಮುಂದಿನ ದಿನಗಳಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಏಕಕಾಲದಲ್ಲಿ 7.5 ಲಕ್ಷ ರೂ. ಅನುದಾನವನ್ನು ನೀಡಿ ಸಹಕರಿಸಲಾಗುವುದು. ಮಡಿವಾಳ ಜನಾಂಗವನ್ನು ಎಸ್‌ಸಿ ಸಮುದಾಯಕ್ಕೆ ಸೇರಿಸಲು ಮುಖಂಡರೊಂದಿಗೆ ಚರ್ಚಿಸಿ ವಿಧಾನಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ.ಎಂ. ಗೋವಿಂದರಾಜು, ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಷ್ಮೀ ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ರಘು, ಸದಸ್ಯರಾದ ಮೋಹನ್, ನವೀನ್, ಆರ್‌ಎಂಸಿ ಮಾಜಿ ಅಧ್ಯಕ್ಷ ಮಂಜಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್ ಮರಗೂರ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಅಧ್ಯಕ್ಷ ಸಿ.ಜೆ. ಮಂಜುನಾಥ್, ಉಪಾಧ್ಯಕ್ಷ ಧರ್ಮರಾಜ್, ರಾಜ್ಯ ಮಡಿವಾಳ ಸಂಘದ ನಿರ್ದೇಶಕ ಬಿ.ನಾಗರಾಜು, ಮಾಜಿ ಪುರಸಭಾ ಅಧ್ಯಕ್ಷ ಸಿ.ಜೆ.ನಟರಾಜು, ಮಾಜಿ ಅಧ್ಯಕ್ಷ ಕೃಷ್ಣಪ್ಪ ಮುಖಂಡರಾದ ಲೋಹಿತ್, ಲೋಕೇಶ್, ಬೈರಾಜು ನಾಗೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net