

ಚಿತ್ರದುರ್ಗ: ಚಿತ್ರದುರ್ಗ ಜಿಆರ್‌ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಚಿರತೆ, ಕರಡಿಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ಕೇಂದ್ರದ 82 ಎಕರೆ ಸುತ್ತ 10 ಕೋಟಿ ರೂ.ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ದಾವಣಗೆರೆ ವಿವಿ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ತಿಳಿಸಿದರು.
ಸ್ನಾತಕೋತ್ತರ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಈ ಸಂಬಂಧ ಜಿಲ್ಲಾ ಖನಿಜ ಅಭಿವೃದ್ಧಿ ನಿಗಮದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಚಿರತೆ, ಕರಡಿಗಳ ಓಡಾಟದಿಂದ ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿರುವ ಭಯ ತೊಡೆದು ಹಾಕಲು ವಿವಿ ಅಗತ್ಯವಿರುವ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಪಿಜಿ ಅಧ್ಯಯನ ಕೇಂದ್ರ, ಮೆಡಿಕಲ್ ಕಾಲೇಜು, ಪುರುಷ, ಮಹಿಳಾ ವಿದ್ಯಾರ್ಥಿನಿಲಯಗಳು ಇಲ್ಲಿವೆ. ಕಾಂಪೌಂಡ್ ಜತೆಗೆ ಸಿಸಿ ಕ್ಯಾಮರಾ, ಸೋಲಾರ್ ದೀಪ ಅಳವಡಿಸಲಾಗುವುದು ಎಂದು ತಿಳಿಸಿದರು.
*ಕೌಶಲ ವೃದ್ಧಿಗೆ ಆದ್ಯತೆ*
ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಕೌಶಲ ವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಶೈಕ್ಷಣಿಕ ಸವಾಲುಗಳಿಗೆ ತಕ್ಕಂತಹ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ.ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಪ್ರೊ. ಕುಂಬಾರ್ ತಿಳಿಸಿದರು.
ಮುಂದಿನ ವರ್ಷದಿಂದ ಕನಿಷ್ಠ 2 ಹೊಸ ವಿಭಾಗಗಳನ್ನು ಇಲ್ಲಿ ತೆರೆಯುವ ಅಲೋಚನೆ ಇದೆ. ಇದರೊಂದಿಗೆ ಕಂಪ್ಯೂಟರ್ ವಿಭಾಗಕ್ಕೆ ಇನ್ನಷ್ಟು ಬಲ ತುಂಬಲು ನಿರ್ಧರಿಸಲಾಗಿದೆ. ಹೆಚ್ಚುವರಿ ಕಂಪ್ಯೂಟರ್ ಪೂರೈಕೆ, ಇಂಟರ್‌ನೆಟ್ ಸೌಲಭ್ಯ, ತರಬೇತುದಾರರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
* ಮದಕರಿ ನಾಯಕ, ಓಬವ್ವ ಹೆಸರು ನಾಮಕರಣ*
ಸ್ನಾತಕೋತ್ತರ ಕೇಂದ್ರದ ಪುರುಷ ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳಿಗೆ ಕ್ರಮವಾಗಿ ಮದಕರಿನಾಯಕರ ಹಾಗೂ ಒನಕೆ ಓಬವ್ವ ಅವರ ಹೆಸರು ನಾಮಕರಣ ಮಾಡಲು ಕುಲಪತಿ ಸೂಚಿಸಿದರು.
ಪಿ.ಜಿ.ಕೇಂದ್ರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಪೂರಕವಾಗಿ ಹೆಚ್ಚುವರಿ ನಗರ ಸಾರಿಗೆ ಬಸ್‌ಗಳನ್ನು ಓಡಿಸುವ ಅಗತ್ಯವಿದೆ ಎಂ ದು ಕೇಂದ್ರದ ನಿದೇರ್ಶಕ ಡಾ.ಸತ್ಯನಾರಾಯಣ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಕುಲಪತಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂ ತ್ರಕರ ಜತೆ ಮಾತನಾಡುವುದಾಗಿ ತಿಳಿಸಿದರು.
ಡಾ.ಸುಂದರಂ,ಡಾ.ರೂಪೇಶ್‌ಕುಮಾರ್,ಡಾ.ಶೌಕತ್‌ಅಲಿ, ಡಾ.ಕುಮಾರ್,ಡಾ.ಸತೀಶ್, ಡಾ. ನಿವೇದಿತಾ, ಡಾ. ಕೀರ್ತಿಕುಮಾರ್, ಡಾ.ಮಂಜುನಾಥ್, ಡಾ.ಮಹಾಂತೇಶ ಪಾಟೀಲ್ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ
ಪಿ.ಜಿ.ಕೇಂದ್ರದಲ್ಲಿ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಪ್ರಗತಿ ವರದಿ ಸಲ್ಲಿಸಿ. ವಿದ್ಯಾರ್ಥಿ ನಿಲಯಗಳಿಗೆ ನಿಯಮಿತವಾಗಿ ವೈದ್ಯರನ್ನು ಆಹ್ವಾನಿಸಿ ಆರೋಗ್ಯ ತಪಾಸಣೆ ನಡೆಸಬೇಕು.
- ಪ್ರೊ.ಬಿ.ಡಿ.ಕುಂಬಾರ್, ದಾವಣಗೆರೆ ವಿವಿ ಉಪ ಕುಲಪತಿ