

ಸಾಗರ: ಕೆಳದಿ ವಸ್ತು ಸಂಗ್ರಹಾಲಯದ ವಶದಲ್ಲಿರುವ 2 ಎಕರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಹೆಸರಿನಲ್ಲಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರವನ್ನು ಕುವೆಂಪು ವಿವಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
ತಾಲೂಕಿನ ಕೆಳದಿಯಲ್ಲಿ ಕುವೆಂಪು ವಿವಿ ವ್ಯಾಪ್ತಿಗೊಳಪಡುವ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರಕ್ಕೆ ಗುರುವಾರ ಸಿಂಡಿಕೇಟ್ ಸದಸ್ಯರ ಜತೆ ಭೇಟಿ ನೀಡಿ ಪರಿಶೀಲಿಸಿದ ಅವರು, ದಕ್ಷಿಣ ಭಾರತದಲ್ಲಿ 25 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕೀರ್ತಿ ಕೆಳದಿ ರಾಣಿ ಚೆನ್ನಮ್ಮಾಜಿ ಅವರದ್ದು. ಕೆಳದಿ ಇತಿಹಾಸ ಶಾಶ್ವತವಾಗಿಸಲು ವಿವಿ ಶ್ರಮಿಸಲಿದೆ ಎಂದರು.
ಕುವೆಂಪು ವಿವಿ ಕೆಳದಿ ಇತಿಹಾಸ ಸಂಶೋಧನಾ ಕೇಂದ್ರವನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಬೇಡ. ಕೆಳದಿ ಮ್ಯೂಸಿಯಂಗೆ ಸಂಬಂಧಪಟ್ಟ ಇಲಾಖೆಯಿಂದ 2.50 ಕೋಟಿ ರೂ. ಹಣ ಬರಬೇಕಿದೆ. ಈ ಬಗ್ಗೆ ಗಮನಹರಿಸಲಾಗಿದೆ. ವಿಧಾನಪರಿಷತ್ ಸದಸ್ಯರಿಬ್ಬರು ಸರ್ಕಾರದಿಂದ ಹಣ ತರಿಸಿಕೊಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಹಣ ಬರದೇ ಇದ್ದರೂ ಕುವೆಂಪು ವಿವಿ ವ್ಯಾಪ್ತಿಯಲ್ಲಿರುವ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ತೀರ್ವನಿಸಲಾಗಿದೆ ಎಂದರು.
ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಕಿರಣ ದೇಸಾಯಿ, ಸಂತೋಷ್ ಬಳ್ಳೆಕೆರೆ ಮಾತನಾಡಿ, ಕೆಳದಿ ಮ್ಯೂಸಿಯಂ ಅಭಿವೃದ್ಧಿಯೇ ಸಿಂಡಿಕೇಟ್ ಸದಸ್ಯರ ಪ್ರಮುಖ ಗುರಿ. ಇಲ್ಲಿ ಕೆಲಸ ಮಾಡುತ್ತಿರುವವರಿಗೆ ಬಾಕಿ ವೇತನ, ಪಿಂಚಣಿ ಸೇರಿ ಎಲ್ಲವನ್ನೂ ಕೊಡಿಸಲಾಗುತ್ತದೆ. ಇದರ ಜತೆಗೆ ಅಧ್ಯಾಯನಾಸಕ್ತರಿಗೆ ಶಿಬಿರ ಆಯೋಜಿಸುವ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದು ತಿಳಿಸಿದರು.
ಹಿರಿಯ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಅವರನ್ನು ಸನ್ಮಾನಿಸಲಾಯಿತು. ಸಿಂಡಿಕೇಟ್ ಸದಸ್ಯರಾದ ರಾಮಲಿಂಗಪ್ಪ, ರಮೇಶ್ಬಾಬು, ಮಂಜುನಾಥ್, ನಿರಂಜನಮೂರ್ತಿ, ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್, ಪ್ರಮುಖರಾದ ಡಾ. ಕೆಳದಿ ವೆಂಕಟೇಶ್ ಜೋಯ್್ಸ ಡಾ. ಜಿ.ವಿ.ಕಲ್ಲಾಪುರ, ಯು.ಎಚ್.ರಾಮಪ್ಪ, ದೇವೇಂದ್ರ ಬೆಳೆಯೂರು, ರಾಧಾಕೃಷ್ಣ ಬಂದಗದ್ದೆ, ಕೇಶವಮೂರ್ತಿ, ಸತೀಶ್ ಅದರಂತೆ ಇದ್ದರು.
ಎಲ್ಲ ಸಿಂಡಿಕೇಟ್ ಸದಸ್ಯರಿಗೆ ಕೆಳದಿ ಇತಿಹಾಸ ಉಳಿಸುವ ಬಗ್ಗೆ ಆಸಕ್ತಿ ಇದೆ. ಸಿಂಡಿಕೇಟ್ ಸಭೆಯಲ್ಲಿ ಕೆಳದಿ ಅಭಿವೃದ್ಧಿ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಸೋರುತ್ತಿರುವ ಕೆಳದಿ ವಸ್ತು ಸಂಗ್ರಹಾಲಯ ಕೊಠಡಿಯ ಮೇಲ್ಛಾವಣಿಯನ್ನು 20 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗುತ್ತಿದೆ.
| ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಪತಿ