ಆ್ಯಸಿಡ್ ದಾಳಿ ಅಪರಾಧಿಗಳಿಗೆ 10 ವರ್ಷ ಜೈಲುಶಿಕ್ಷೆ

10 years imprisonment for acid attack criminals
ಜಮಖಂಡಿಯ ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕವಿತಾ ಉಂಡೋಡಿ ಉದ್ಘಾಟಿಸಿದರು. ಹಿರಿಯ ವಕೀಲ ಎಸ್.ಬಿ. ಕಾಳೆ, ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಇತರರಿದ್ದರು.
Published on

ಜಮಖಂಡಿ: ವ್ಯಕ್ತಿಗಳ ಮೇಲೆ ಆ್ಯಸಿಡ್ ದಾಳಿ ನಡೆಸುವ ಅಪರಾಧಿಗಳಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಜೀವಾವಧಿಗೆ ವಿಸ್ತರಿಸಬಹುದಾಗಿದೆ ಎಂದು ಸಿಪಿಐ ಎಂ.ಡಿ. ಮಡ್ಡಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ನಗರದ ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಆ್ಯಸಿಡ್ ದಾಳಿಗೆ ತುತ್ತಾದವರಿಗೆ ಪರಿಹಾರ ಯೋಜನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆ್ಯಸಿಡ್ ದಾಳಿಗೆ ತುತ್ತಾಗುವ ಸಂತ್ರಸ್ತರಿಗೆ ರೂ. 2 ಲಕ್ಷ ಹಾಗೂ ಸಂತ್ರಸ್ತರ ಕುಟುಂಬಕ್ಕೆ ರೂ.1ಲಕ್ಷ ಪರಿಹಾರ ನೀಡಲಾಗುತ್ತದೆ. ದೀರ್ಘಾವಧಿ ಅಥವಾ ಅಲ್ಪಾವಧಿ ಚಿಕಿತ್ಸೆಯನ್ನು ಉಚಿತವಾಗಿ ಕೊಡಿಸಲಾಗುತ್ತದೆ. ದಾಳಿಗೆ ತುತ್ತಾದ ಸಂತ್ರಸ್ತರು ಅಂಗವಿಕಲರಾದರೆ ಮಾಸಿಕ ರೂ. 3 ಸಾವಿರ ಪರಿಹಾರಧನ ನೀಡಲಾಗುವುದು ಎಂದರು.

ಸಂತ್ರಸ್ತರು ಸ್ವಂತ ಉದ್ದಿಮೆದಾರರಾಗಿದ್ದರೆ ಅವರ ಉದ್ದಿಮೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿದ್ದರೆ ಉದ್ಯೋಗ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಅಶಕ್ತರಾಗಿದ್ದರೆ ಬೇರೆ ಉದ್ಯೋಗ ಒದಗಿಸಲಾಗುವುದೆಂದು ತಿಳಿಸಿದರು.

ಹಿರಿಯ ವಕೀಲ ಎಸ್.ಬಿ. ಕಾಳೆ ಮಾತನಾಡಿ, ಭಾರತದ ಸಂವಿಧಾನದಲ್ಲಿ ಆರೋಪಿಗಳಿಗೂ ರಕ್ಷಣೆ ನೀಡಲಾಗಿದೆ. ಏಕೆಂದರೆ ಆರೋಪ ಸಾಬೀತಾಗಿ ಅಪರಾಧಿ ಎನಿಸುವವರೆಗೆ ರಕ್ಷಣೆ ನೀಡಬೇಕಾಗುತ್ತದೆ. ಆರೋಪ ಸಾಬೀತಾದ ಮೇಲೆ ಅಪರಾಧಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 1975-76ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ದೇಶವಾಸಿಗಳು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಸಹ ಸಂವಿಧಾನದಲ್ಲಿ ಸೇರಿಸುವ ಬಗ್ಗೆ ಚಿಂತನೆ ನಡೆಸಿ 42ನೇ ತಿದ್ದುಪಡಿ ಪ್ರಕಾರ 1976ರಲ್ಲಿ ಕರ್ತವ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು ಎಂದರು.

ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ ಮಾತನಾಡಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಮುಲ್ಲಾ ಇದ್ದರು.

ಪೂಜಾ ಭಜಂತ್ರಿ, ಸುಮಾ ಮಠಪತಿ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆ ಅಧ್ಯಕ್ಷ ಡಾ. ಗಿರೀಶ ಕಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಡಾ. ಮಹಾದೇವ ಕುಂಬಾರ ನಿರೂಪಿಸಿದರು. ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net