

ಹಾವೇರಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,11,000 ರೂ. ದಂಡ ವಿಧಿಸಿ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯ (ಶೀಘ್ರಗತಿ ನ್ಯಾಯಾಲಯ-1) ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ಕೊಟ್ಟ ಗ್ರಾಮದ ಮಧು ದೇವರಾಜ ಹಳೇಮನಿ ಶಿಕ್ಷೆಗೀಡಾದ ವ್ಯಕ್ತಿ. ಅಪ್ರಾಪ್ತೆ ಎಂದು ಗೊತ್ತಿದ್ದರೂ ಆಕೆಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ತನ್ನ ಸಂಬಂದಿಕರ ಮನೆಯಲ್ಲಿ ಮೂರು ದಿನ ಅಕ್ರಮ ಬಂಧನದಲ್ಲಿ ಇರಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಹಂಸಭಾವಿಯ ಅಂದಿನ ತನಿಖಾಧಿಕಾರಿ, ಸಿಪಿಐ ಮಂಜುನಾಥ ಪಂಡಿತ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಹಾವೇರಿಯ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ವಿಚಾರಣೆ ನಡೆಸಿ, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 1.11 ಲಕ್ಷ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವಿಜಯಕುಮಾರ ಎಸ್. ಪಾಟೀಲ ವಾದ ಮಂಡಿಸಿದ್ದರು.
5 ಲಕ್ಷ ರೂ. ಪರಿಹಾರ
ದಂಡದ ಹಣದಲ್ಲಿ 1 ಲಕ್ಷ ರೂ. ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿಯಿಂದ 4 ಲಕ್ಷ ರೂ. ಸೇರಿ ಒಟ್ಟು 5 ಲಕ್ಷ ರೂ. ಪರಿಹಾರವನ್ನು ಬಾಲಕಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.