

ಕಾರವಾರ: ತಾನು ಕರೆದಾಗ ಮನೆ ಕೆಲಸಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ವ್ಯಕ್ತಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ 6 ಸಾವಿರ ರೂ ದಂಡ ವಿಧಿಸಿದೆ.
ಹಳಿಯಾಳದ ಗರಡೊಳ್ಳಿಯ ಬಸ್ತ್ಯಾಂವ ಬೆನಿತ್ ಗೋದೋಳ್ಕರ್ ಶಿಕ್ಷೆಗೊಳಗಾದ ಅಪರಾಧಿ.
2019 ರ ಸೆಪ್ಟೆಂಬರ್ ನಲ್ಲಿ ಪ್ರಾನ್ಸಿಸ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳಿಯಾಳ ಪೊಲೀಸ್ ಠಾಣೆಯ ಆಗಿನ ಪಿಎಸ್ಐ ಆನಂದಮೂರ್ತಿ ಹಲ್ಲೆ ಮಾಡಿದಾತನನ್ನು ಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಲಾರಿ ಡಿಕ್ಕಿಯಾಗಿ ಚಾಲಕರಿಗೆ ಗಾಯ
ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ಪೀಠಾಸೀನ ಅಧಿಕಾರಿ ಕಿರಣ ಕಿಣಿ ಅವರು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಹಲ್ಲೆಗೊಳಗಾದವನಿಗೆ 6 ಸಾವಿರ ರೂ. ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ ಮಳಗೀಕರ್ ವಾದ ಮಂಡಿಸಿದ್ದರು.