

| ಗಿರೀಶ್ ಗರಗ ಬೆಂಗಳೂರು
ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಮ್ಮ ಮೆಟ್ರೋ ರೈಲು ಸೇವೆ ಆರಂಭವಾಗಿ ಮಂಗಳವಾರಕ್ಕೆ 10ನೇ ವರ್ಷಕ್ಕೆ ಕಾಲಿಟ್ಟಿದೆ. ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗದಲ್ಲಿ 2011ರ ಅ. 20 ರೈಲು ಸೇವೆ ಆರಂಭವಾದ ನಂತರದಿಂದ ಈವರೆಗಿನ ಮೆಟ್ರೋ ಸೇವೆಯ ಏಳುಬೀಳುಗಳ ಮಾಹಿತಿ ಇಲ್ಲಿದೆ.
ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಸರಾಸರಿ 10 ಲಕ್ಷ ಹೆಚ್ಚುತ್ತಲಿದೆ. 2020ರ ಮೇ ಅಂತ್ಯದವರೆಗೆ ರಾಜ್ಯದಲ್ಲಿ 2,46,07,104 ವಾಹನಗಳು ನೋಂದಣಿಯಾಗಿದ್ದರೆ, ಅದರಲ್ಲಿ ಬೆಂಗಳೂರಿನಲ್ಲೇ 94,59,376 ವಾಹನಗಳಿದ್ದವು. 820 ಚದರ ಕಿಮೀ ವಿಸ್ತೀರ್ಣವುಳ್ಳ ನಗರದ ಸಂಚಾರದಟ್ಟಣೆಗೆ ಪರಿಹಾರ ಎನ್ನುವಂತೆ ನಿರ್ವಣಗೊಂಡಿರುವ ಮೆಟ್ರೋ ರೈಲು ಸೇವೆಗೆ ಅ. 20ಕ್ಕೆ 9 ವರ್ಷ ಪೂರ್ಣಗೊಂಡಿದೆ.
ಸುರಂಗದಿಂದ ವಿಳಂಬ: ಭೂಸ್ವಾಧೀನ ಸೇರಿ ಇನ್ನಿತರ ಕಾರ್ಯಗಳು ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಆದರೆ, ಸುರಂಗ ಮಾರ್ಗ ನಿರ್ವಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಡಕುಗಳು ಎದುರಾದವು. ನೆಲದಾಳದಲ್ಲಿನ ಪರಿಸ್ಥಿತಿ ಅರಿಯುವಲ್ಲಿ ವಿಫಲವಾದ ಬಿಎಂಆರ್ಸಿಎಲ್, ಸುರಂಗ ಮಾರ್ಗ ನಿರ್ಮಾಣ ಸಾಕಷ್ಟು ವಿಳಂಬವಾಗುವಂತಾಯಿತು. ಮಲ್ಲೇಶ್ವರ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ಸುರಂಗ ಕೊರೆಯುವ ವೇಳೆ ‘ಗೋದಾವರಿ’ ಯಂತ್ರಕ್ಕೆ ಗಟ್ಟಿ ಬಂಡೆ ಸಿಕ್ಕಿ ಯಂತ್ರದ ಕಟರ್ ಹೆಡ್ ಹಾಳಾಗಿತ್ತು. 2014ರ ಜೂನ್ನಲ್ಲಿ ದುರಸ್ತಿ ಮಾಡಲಾಗಿತ್ತು. ಈ ಮಧ್ಯೆ ಒಂದು ವರ್ಷ ಕಾಮಗಾರಿ ಸ್ಥಗಿತವಾಗಿತ್ತು. ಒಟ್ಟಾರೆ 42 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳ್ಳಲು ಸತತ 11 ವರ್ಷಗಳು ತಗುಲಿದವು.
2024ಕ್ಕೆ ಎಲ್ಲೆಡೆ ಸೇವೆ
72 ಕಿ.ಮೀ. ಉದ್ದದ ಮೆಟ್ರೋ 2ನೇ ಹಂತದ ಯೋಜನೆಗೆ ಚಾಲನೆ ನೀಡಲಾಗಿದೆ. ನವೆಂಬರ್ನಲ್ಲಿ ಈ ಹಂತದ ಮೊದಲ ಮಾರ್ಗವಾದ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ಮಾರ್ಗದಲ್ಲಿ ರೈಲು ಸೇವೆ ಆರಂಭವಾಗಲಿದೆ. 2024ಕ್ಕೆ ಒಟ್ಟಾರೆ ಎಲ್ಲ ಮಾರ್ಗದಲ್ಲೂ ರೈಲು ಸೇವೆ ನೀಡಲು ನಿರ್ಧರಿಸಲಾಗಿದೆ. ಜತೆಗೆ 52 ಕಿ.ಮೀ. ಉದ್ದದ ಹೊರವರ್ತಲ ರಸ್ತೆ ಮತ್ತು ವಿಮಾನನಿಲ್ದಾಣ ಸಂರ್ಪಸುವ ಮಾರ್ಗಗಳ ನಿರ್ವಣಕ್ಕೆ ಚಾಲನೆ ನೀಡಲಾಗುತ್ತಿದೆ.
1994ರ ಯೋಜನೆ
ಬೆಂಗಳೂರಿಗೆ ಮೆಟ್ರೋ ಸೇವೆ ಆರಂಭಿಸುವ ಕಾರ್ಯದ ಬಗ್ಗೆ ಚಿಂತನೆ ಆರಂಭವಾಗಿದ್ದು 1994ರಲ್ಲಿ. ಬೆಂಗಳೂರು ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಲಿ. ಸಂಸ್ಥೆ ಲೈಟ್ ರೈಲು ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿತ್ತು. ಅದಾದ ನಂತರ 2003ರಲ್ಲಿ ದೆಹಲಿ ಮೆಟ್ರೋ ನಿಗಮ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿತ್ತು. 2005ರಲ್ಲಿ ಬಿಎಂಆರ್ಟಿಎಲ್ ಅನ್ನು ಬಿಎಂಆರ್ಸಿಎಲ್ ಆಗಿ ಮರುನಾಮಕರಣ ಮಾಡಿ ಯೋಜನೆ ಅನುಷ್ಠಾನದ ವಿಶೇಷ ಉದ್ದೇಶ ವಾಹಕವನ್ನಾಗಿ ಮಾಡಲಾಯಿತು. 2006ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತು, ಶಂಕುಸ್ಥಾಪನೆಯೂ ನೆರವೇರಿಸಲಾಯಿತು. 2007ರಲ್ಲಿ ಅಧಿಕೃತವಾಗಿ ಸಿವಿಲ್ ಕಾಮಗಾರಿ ಆರಂಭಿಸಲಾಯಿತು.
ವಾರ್ಷಿಕ 13.30 ಕೋಟಿ ಪ್ರಯಾಣಿಕರ ಸಂಚಾರ
ಮೆಟ್ರೋ ಮಾರ್ಗದಲ್ಲಿ ಬಿರುಕು
ಕಾಮಗಾರಿ ಪೂರ್ಣಗೊಂಡು 10 ವರ್ಷ ಪೂರ್ಣ ಗೊಳ್ಳುವುದಕ್ಕೆ ಮುನ್ನವೇ ಮೆಟ್ರೋ ಮಾರ್ಗದಲ್ಲಿ ಹಲವು ದೋಷಗಳು ಕಾಣಿಸಿಕೊಂಡಿವೆ. ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಮೆಟ್ರೋ ಪಿಲ್ಲರ್ಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜತೆಗೆ ಸುರಂಗ ಮಾರ್ಗ, ಮೆಟ್ರೋ ನಿಲ್ದಾಣಗಳಲ್ಲಿ ಮಳೆಗಾಲ ಬಂತೆಂದರೆ ನೀರು ಸೋರುತ್ತಿದೆ. ಇದು ಮೆಟ್ರೋ ಕಾಮಗಾರಿ ಬಗ್ಗೆಯೇ ಆತಂಕ ಪಡುವಂತಾಗಿದೆ.
ಬೆಳಗ್ಗೆ, ಸಂಜೆ ಮೆಟ್ರೋ ರೈಲುಗಳ ಸಂಚಾರ ಹೆಚ್ಚಳ
ಬೆಂಗಳೂರು: ಬೆಳಗ್ಗೆ ಮತ್ತು ಸಂಜೆ ವೇಳೆ ಮೆಟ್ರೋ ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಕರೊನಾ ನಡುವೆ ಆರಂಭಿಸಲಾದ ಮೆಟ್ರೋಗೆ ಪ್ರಯಾಣಿಕರ ಕೊರತೆ ಎದುರಾಗಿತ್ತು. ಈಗ ನಿತ್ಯ 50 ಸಾವಿರಕ್ಕೂ ಹೆಚ್ಚಿನ ಜನರು ಸಂಚರಿಸುತ್ತಿದ್ದಾರೆ.
ಸೋಮವಾರದಿಂದ ಶುಕ್ರವಾರ ದವರೆಗೆ ಹಾಗೂ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬೆಳಗ್ಗೆ 9ರಿಂದ 10ರವರೆಗೆ ಮತ್ತು ಸಂಜೆ 5.30ರಿಂದ 6.30ರವರೆಗೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಬೆಳಗ್ಗೆ 8ರಿಂದ 9, 10ರಿಂದ 11 ಹಾಗೂ ಸಂಜೆ 4.30ರಿಂದ 5.30, 6.30ರಿಂದ ರಾತ್ರಿ 7.30ರವರೆಗೆ 6 ನಿಮಿಷಕ್ಕೊಂದು ಉಳಿದ ಅವಧಿಯಲ್ಲಿ ಪ್ರತಿ 12 ನಿಮಿಷಕ್ಕೊಂದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ, ಎಲ್ಲ ಭಾನುವಾರ ಹಾಗೂ ರಜಾ ದಿನಗಳಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12, ಸಂಜೆ 5.30ರಿಂದ ರಾತ್ರಿ 7.30ರವರೆಗೆ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.