

ಮಡಿಕೇರಿ: ರಾಜ್ಯಾದಾದ್ಯಂತ ೧೦೦ ಗ್ರಾಮ ನ್ಯಾಯಾಲಗಳನ್ನು ಸ್ಥಾಪಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ೧೦ ಗ್ರಾಮಗಳನ್ನು ಗುರುತಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಸಿ.ಶಾಮ್ ಪ್ರಸಾದ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಡಗದಾಳು ಸರ್ಕಾರಿ ಪ್ರೌಢಶಾಲೆ ವತಿಯಿಂದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಡಕಡೆಯ ವ್ಯಕ್ತಿಗೂ ಸಮಾನ ನ್ಯಾಯ ಸಿಗಬೇಕೆಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಅದರಂತೆ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶವನ್ನು ನೀಡಲು ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತವೆ. ಅದರಂತೆ ಯಾರೇ ಆದರು ಆರ್ಥಿಕ ಅಥವಾ ಇನ್ನಾವುದೇ ದುರ್ಬಲತೆಗಳಿಂದ ಸಿಗಬೇಕಾದ ಅವಕಾಶಗಳಿಂದ ವಂಚಿತರಾಗಬೇಕಾಗಿಲ್ಲ. ಪ್ರಾಧಿಕಾರದ ಮೂಲಕ ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಾಗುವುದು ಎಂದ ಅವರು, ರಾಜ್ಯಾದಾದ್ಯಂತ ೧೦೦ ಗ್ರಾಮ ನ್ಯಾಯಾಲಗಳನ್ನು ಸ್ಥಾಪಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ೧೦ ಗ್ರಾಮಗಳನ್ನು ಗುರುತಿಸಲಾಗುವುದು ಎಂದರು.
ಗ್ರಾಮದಲ್ಲಿರುವ ಹಳ್ಳಿಗರು ಸಹ ನಗರಕ್ಕೆ ಬಂದು ನ್ಯಾಯ ಪಡೆಯಲು ಅಸಾಧ್ಯವಾದರೆ ಅವರಲ್ಲಿಗೆ ಹೋಗಿ ನ್ಯಾಯ ನೀಡಬೇಕೆಂಬುವುದು ಇದರ ಉದ್ದೇಶವಾಗಿದೆ. ಅಂದರೆ ನ್ಯಾಯದಿಂದ ಯಾರೂ ವಂಚಿತರಾಗಬಾರದು ಎಂಬುದಾಗಿದೆ. ಸಂವಿಧಾನದಲ್ಲಿ ತಿಳಿಸಿರುವಂತೆ ದೇಶದಲ್ಲಿ ನಾವೆಲ್ಲರೂ ಸಮಾನರು. ಸಮಾನತೆ ಎಂಬುದು ನಮ್ಮ ವ್ಯವಸ್ಥೆಯ ಪ್ರಮುಖ ಅಂಗ. ಆದರೆ, ಕೆಲವೊಂದು ಕಾರಣಗಳಿಂದ ಈಗಲೂ ಅಸಮಾನತೆ ಜೀವಂತವಾಗಿರುವುದು ದುರಂತವೆಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಪ್ರತಿಯೊಬ್ಬರೂ ಕನಿಷ್ಠ ಕಾನೂನಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಪ್ರಸಕ್ತ ಆಧುನಿಕತೆಯ ಸೋಗಿನಲ್ಲಿ ಮೊಬೈಲ್‌ಗೆ ಅತಿ ಹೆಚ್ಚು ದಾಸ್ಯರಾಗಿರುವುದು ಕಳವಳಕಾರಿ, ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ನಾವು ಪ್ರತಿಪಾದಿಸುತ್ತೇವೆ ಹೊರತು ನಮ್ಮ ಕರ್ತವ್ಯಗಳನ್ನು ಮರೆತಿದ್ದೇವೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಧಾನ ಕಾನೂನು ನೆರವು ಅಭಿರಕ್ಷಕ ಕೆ.ಆರ್.ವಿದ್ಯಾಧರ ಗೌಡ, ಇಂದಿನ ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ, ಪೋಕ್ಸೋ ವಿಷಯದ ಬಗ್ಗೆ ಹಾಗೂ ಕಾನೂನು ಸೇವಾ ದಿನಾಚರಣೆಯ ಪ್ರಯುಕ್ತ ಪ್ರಾಧಿಕಾರದಿಂದ ದೊರೆಯುವ ಸೌಲಭ್ಯಗಳು, ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಕೆ.ಬಿ.ಪ್ರಸಾದ್‌ರವರು ಸೈಬರ್ ಕ್ರೈಂ., ಗ್ರಾಹಕರ ಹಕ್ಕುಗಳು ನ್ಯಾಯಾಲಯದ ಕಲಾಪಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಸುದೀರ್ಘವಾಗಿ ಉತ್ತರಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಶಾಲಾ ಮುಖ್ಯ ಶಿಕ್ಷಕಿ ಭಾರತಿ, ಅಧ್ಯಕ್ಷ ನಾಸರ್, ಪ್ರಮುಖರಾದ ಬಿ.ಎಸ್.ಜಯಪ್ಪ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಬಿ.ಎನ್.ವಿಮಲ ಸ್ವಾಗತಿಸಿ, ಭಾರತಿ ವಂದಿಸಿದರು.