

ಉಡುಪಿ: ಸರ್ವೇಯರ್‌ಗಳ ಮುಷ್ಕರದಿಂದ ಜನವರಿಯಿಂದ ಸರ್ವೇ ಕಾರ್ಯಗಳು ನಡೆಯದೆ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಪರ್ಯಾಯ ಮಾರ್ಗೋಪಾಯಗಳನ್ನು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ಜಿಪಂ ಸಭಾಂಗಣದಲ್ಲಿ ಈ ಅಧಿಕಾರಾವಧಿಯ ಕೊನೆಯ ಸಾಮಾನ್ಯಸಭೆ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಸರ್ವೇ ಕಾರ್ಯ ಸ್ಥಗಿತವಾಗಿದ್ದರಿಂದ ಜಾಗ ಮಾರಾಟಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಭೂ ದಾಖಲೆಗಳ ಉಪನಿರ್ದೇಶಕ, ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ 3426 ಅರ್ಜಿಗಳು ಬಂದಿದ್ದು, 33 ಸರ್ಕಾರಿ ಸರ್ವೇಯರ್‌ಗಳು 1,222 ಅರ್ಜಿಗಳನ್ನು ವಿಲೇವಾರಿ ಮಾಡಿದ್ದಾರೆ. ಪ್ರಸ್ತುತ ಸುಮಾರು 10 ಸಾವಿರ ಅರ್ಜಿಗಳು ಬಾಕಿ ಇವೆ. ಹೊಸದಾಗಿ 2 ಸಾವಿರ ಸರ್ವೇಯರ್‌ಗಳನ್ನು ಸರ್ಕಾರ ನೇಮಕ ಮಾಡಿದ್ದು, ತರಬೇತಿ ನೀಡಲಾಗುತ್ತಿದೆ. ಮುಷ್ಕರ ಮುಂದುವರಿದರೆ ತರಬೇತಿ ಅವಧಿ 1.5 ತಿಂಗಳಿಗೆ ಕಡಿತಗೊಳಿಸಿ ಸೇವೆಗೆ ನಿಯೋಜಿಸಲಾಗುತ್ತದೆ ಎಂದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಅರ್ಜಿ ವಿಲೇವಾರಿ ಮಾಡುವಾಗ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಜಾಗಗಳಿಗೆ ಆದ್ಯತೆ ನೀಡಬೇಕು ಎಂದರು. ಈ ಸಂದರ್ಭ ಮಾತನಾಡಿದ ಜಿಪಂ ಸಿಇಒ ಡಾ. ನವೀನ್ ಭಟ್, ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಕಳಪೆ ಕಾಮಗಾರಿಗೆ ಆಕ್ಷೇಪ
ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಹಾವಂಜೆಯಲ್ಲಿ ಕೆರೆಯ ಬದಿಯಲ್ಲಿ ರಿಂಗ್‌ಗಳನ್ನು ಜೋಡಿಸಿ ಬಾವಿ ರೂಪ ನೀಡಿ ಗುತ್ತಿಗೆದಾರರು ವಂಚಿಸುತ್ತಿದ್ದಾರೆ. ಈ ಬಗ್ಗೆ ಜಿಪಂ ಅಧ್ಯಕ್ಷರು, ಸಿಇಒ ಬಂದು ಕ್ರಮಕೈಗೊಳ್ಳಬೇಕು ಎಂದರು. ಕಳಪೆ ಕಾಮಗಾರಿಯಾಗಿದ್ದರೆ 3ನೇ ವ್ಯಕ್ತಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ತಿಳಿಸಿದರು.
ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಸುಜ್ಲಾನ್ ಕಂಪನಿಗೆ ಕೈಗಾರಿಕೆ ಸ್ಥಾಪನೆಗೆ 641 ಎಕ್ರೆ ಜಾಗ ಕೆಐಡಿಬಿ ಮೂಲಕ ರಾಜ್ಯ ಸರ್ಕಾರ ನೀಡಿದ್ದು, ಇದನ್ನು ಮೂಲ ಉದ್ದೇಶಕ್ಕೆ ಬಳಸದೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉಜತ್ತರಿಸಿದ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ, ಸಂಸ್ಥೆಯ ಬೆಳವಣಿಗೆ ಬಗ್ಗೆ ವಾಸ್ತವಿಕ ವರದಿ ನೀಡುವಂತೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಕೊಕ್ಕರ್ಣೆಯ ಕೋಟಂಬೈಲಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಳಪೆಯಾಗಿದ್ದು, ಅಧ್ಯಕ್ಷರು ಬಿಲ್ ಪಾವತಿ ಮಾಡದಂತೆ ಸೂಚಿಸಿದರೂ ಗುತ್ತಿಗೆದಾರರಿಗೆ ಹಣ ನೀಡಲಾಗಿದೆ. ಹಾಗಾದರೆ ಜಿ.ಪಂ ನಿರ್ಣಯಕ್ಕೆ ಬೆಲೆ ಇಲ್ಲವೇ? ಸಣ್ಣ ನೀರಾವರಿ ಇಲಾಖೆಯ ಯಾವುದೇ ಕಾಮಗಾರಿ ಬಗ್ಗೆ ಸ್ಥಳೀಯ ಪಂಚಾಯಿತಿಗಳಿಗೆ ಮಾಹಿತಿಯೇ ಇರುವುದಿಲ್ಲ. ಎಂದು ಹೇಳಿದರು. ಪ್ರತಿ ಕಾಮಗಾರಿಯ ಯೋಜನೆ ನೀಲಿ ನಕ್ಷೆ ಮತ್ತು ವೆಚ್ಚ ಪಟ್ಟಿಯನ್ನು ಆಯಾ ಗ್ರಾಪಂಗೆ ಸಲ್ಲಿಸುವಂತೆ ಸದಸ್ಯ ಉದಯ ಕೋಟ್ಯಾನ್ ಮತ್ತು ಬಾಬು ಶೆಟ್ಟಿ ಆಗ್ರಹಿಸಿದರು. ಜಿಪಂ ಸಿಇಒ ಮಾತನಾಡಿ, 10 ದಿನದ ಒಳಗೆ ಇಲಾಖೆಯ ಕಾಮಗಾರಿ ವಿವರ ಎಲ್ಲ ಪಿಡಿಒಗಳಿಗೆ ಮತ್ತು ನನಗೆ ಕಳುಹಿಸಿಕೊಡಬೇಕು ಎಂದರು.
ಸದಸ್ಯೆ ದಿವ್ಯಶ್ರೀ ಅಮೀನ್ ಮಾತನಾಡಿ, ಸೇತುವೆಗಳ ಪಕ್ಕದಲ್ಲೇ ಪ್ಯಾಂಪರ್ಸ್, ಪ್ಯಾಡ್, ಮೊಟ್ಟೆ ಹಾಗೂ ಕೋಳಿ ಮಾಂಸ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದನ್ನು ನಿಯಂತ್ರಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಈಗಾಗಲೇ 141 ಗ್ರಾಪಂಗಳಲ್ಲಿ ಮನೆ ಮನೆ ಕಸ ಸಂಗ್ರಹ ಆರಂಭವಾಗಿದ್ದು, ಕಸ ಸಂಗ್ರಹ ವಾಹನ ಮತ್ತು ಶೆಡ್‌ಗೆ ಅನುದಾನ ನೀಡಲಾಗಿದೆ. ಪ್ಯಾಡ್ ವಿಲೇವಾರಿಗೆ ತಲಾ 20 ಸಾವಿರ ರೂ. ವೆಚ್ಚದಲ್ಲಿ ಇನ್ಸುಲೇಟರ್ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದರು.
ಕರಾವಳಿಯಲ್ಲಿ ಕಾಡುಪ್ರಾಣಿಗಳು, ಮಂಗಗಳ ಹಾವಳಿಯಿಂದ ಕೃಷಿಗೆ ಹಾನಿಯಾಗುತ್ತಿದ್ದು, ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಡುಪ್ರಾಣಿಗಳ ಸಂತತಿ ಶೇ. 60ರಷ್ಟು ವೃದ್ಧಿಯಾಗಿದ್ದು, ಇವುಗಳು ನಾಡಿಗೆ ಬರುವುದನ್ನು ತಪ್ಪಿಸಲು ಕಾಡಿನಲ್ಲಿ ಶೇ. 70ರಷ್ಟು ಹಣ್ಣಿನ ಮರಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್,್ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್ ಉಪಸ್ಥಿತರಿದ್ದರು.
ಗುತ್ತಿಗೆದಾರನಿಗೆ ಯಾಕೆ ಬಿಲ್ ಪಾವತಿಸಿಲ್ಲ?
ಸದಸ್ಯ ರೋಹಿತ್ ಶೆಟ್ಟಿ ಮಾತನಾಡಿ, ಸಿದ್ದಾಪುರದಲ್ಲಿ 2018-19ನೇ ಸಾಲಿನಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿ ನಡೆದಿದ್ದು, ಆದರೂ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ. ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕೆಆರ್‌ಡಿಎಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಂದಿಲ್ಲ. ನೀರು ಕಡಿಮೆ ಇದೆ. ಹೀಗಾಗಿ ಹಣ ನೀಡಿಲ್ಲ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, 10 ಲಕ್ಷ ರೂ. ಯೋಜನಾ ಮೊತ್ತದಲ್ಲಿ 7.5 ಲಕ್ಷ ರೂ. ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸದಸ್ಯರು ಕೆಆರ್‌ಡಿಎಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.