

ಹಾಸನ: ಕರೊನಾ ವೈರಸ್ ಜಿಲ್ಲೆಯಲ್ಲಿ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ನಗರಸಭೆ ಕೆಲ ನಿಯಮಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.
ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆಯಬೇಕು, ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಐದಕ್ಕಿಂತ ಹೆಚ್ಚಿನ ಜನರು ಒಟ್ಟಾಗಿ ಸೇರಬಾರದು ಎಂಬ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಹೀಗಾಗಿ ನಗರಸಭೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದ್ದು ನಿಯಮ ಪಾಲಿಸದವರಿಗೆ ದಂಡದ ಶಿಕ್ಷೆ ವಿಧಿಸುತ್ತಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಬಾಗಿಲು ಹಾಕುವ ಕೆಲಸವನ್ನು ನಗರಸಭೆ ಮಾಡುತ್ತಿದೆ.
ನಗರದ ಇಡ್ಲಿ ಮಾಮು ಹೋಟೆಲ್, ಮಲ್ನಾಡ್ ಚಿಕನ್ ಸೆಂಟರ್, ಎಳನೀರು ಅಂಗಡಿ, ಮಲ್ಲಿಕಾರ್ಜುನ ಪ್ರಾವಿಜನ್ ಸ್ಟೋರ್, ಸೀ ಫಿಶ್ ಕಬಾಬ್, ಕಾಫಿ ಶಾಪ್‌ಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಬೀಗ ಹಾಕಿಸಿದರು.
ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಮೇ 17ರವರೆಗೆ ಲಾಕ್‌ಡೌನ್ ಮುಂದುವರಿದಿದ್ದು, ಸಾರ್ವಜನಿಕರು ಅದನ್ನು ಪಾಲಿಸುತ್ತಿಲ್ಲ. ಇಷ್ಟು ದಿನ ಹಸಿರು ವಲಯದಲ್ಲಿದ್ದ ಹಾಸನ ದಿಢೀರನೆ ಕಿತ್ತಳೆ ವಲಯಕ್ಕೆ ಬದಲಾಗಿದೆ. ಮೈ ಮರೆತರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ನಿಯಮ ಮೀರುವ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಬುಧವಾರ ಒಂದೇ ದಿನ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಿದ್ದು ಅಲ್ಲಿಯೇ ಊಟ, ಉಪಾಹಾರ ನೀಡಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ನಿರೀಕ್ಷಕ ಆದೀಶ್ ಕುಮಾರ್, ರಾಹುಲ್, ರಂಜಿತ್, ಪ್ರಸಾದ್, ಆನಂದ್ ಇತರರಿದ್ದರು.
94 ವರದಿ ಬರಬೇಕು !
ಜಿಲ್ಲೆಯಲ್ಲಿ ಈವರೆಗೆ 3576 ಜನರು ಸ್ಕ್ರೀನಿಂಗ್‌ಗೆ ಒಳಪಟ್ಟಿದ್ದಾರೆ. 3377 ಜನರ ಕಫ ಮತ್ತು ರಕ್ತ ಮಾದರಿ ಪರೀಕ್ಷೆ ನಡೆಸಿದ್ದು 174ರ ವರದಿ ಬರಬೇಕಿದೆ. 87 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಒಂಬತ್ತು ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 492 ಜನರು 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 114 ಜನರು ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದು 94 ಜನರ ವರದಿ ಬರಬೇಕಿದೆ. 1119 ಜನರು ಇಲ್ಲಿವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.