ಸರಗೂರು : ತಾಲೂಕಿನಲ್ಲಿ ಮೂರು ಜಲಾಶಯವಿದ್ದರೂ ಕಬಿನಿ ಜಲಾಶಯ ಮಾತ್ರ ಸಾಮಾನ್ಯವಾಗಿ ಭರ್ತಿಯಾಗುತ್ತಿತ್ತು. ಕೇರಳ ಭತ್ತೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ನೀರಿನ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ನುಗು ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ ಎಂದು ಜಲಾಶಯ ಕಾರ್ಯಪಾಲಕ ಇಂಜಿನಿಯರ್ ಎ.ಸಿ.ಕೃಷ್ಣ ತಿಳಿಸಿದರು.
ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ನುಗು ಜಲಾಶಯಕ್ಕೆ 8 ರಿಂದ 10 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 110 ಅಡಿ ಇದೆ. ಎರಡು ಅಡಿ ಬಾಕಿ ಇರುವಾಗಲೇ, 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ನುಗು ಜಲಾಶಯ ಭರ್ತಿಯಾಗುವುದು ಅಪರೂಪ. ನುಗು ಜಲಾಶಯ 2009 ಮತ್ತು 2013ರಲ್ಲಿ ಭರ್ತಿಯಾಗಿತ್ತು. ಆದಾದ ಬಳಿಕ ಇದೀಗ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ನದಿ ತಟದ ಜಮೀನು ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದ್ದು, ಮುಳ್ಳೂರು ಗ್ರಾಮದ ಸೇತುವೆಗೆ ನೀರು ಅಪಡಿಸುತ್ತಿದ್ದು ಸಂಜೆ ವೇಳೆಗೆ ನೀರು ಬಿಟ್ಟರೆ ಸೇತುವೆ ಮುಳುಗಡೆವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.