

ಬೀರೂರು: ಪುರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ನಿರ್ಮಿಸಿರುವ 10 ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ನೀಡಲು ಬಹಿರಂಗ ಹರಾಜು ನಡೆಸಲಾಯಿತು. ಇದರಿಂದ ಪುರಸಭೆ ಮಳಿಗೆಗಳಿಂದ ಮಾಸಿಕ 1.42 ಲಕ್ಷ ರೂ.ಅದಾಯ ಲಭಿಸಲಿದೆ.
ಪುರಸಭೆ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಬಿಡ್‌ದಾರರು ನಾ ಮುಂದು ತಾ ಮುಂದು ಎಂದು ಇಎಂಡಿ ಹಣವನ್ನು ಪಾವತಿಸಿದರು. ಹರಾಜಿಗಿದ್ದ ಪುರಸಭೆ ಮುಂಭಾಗದ 10 ಮಳಿಗೆಗಳಲ್ಲಿ ಮಳಿಗೆ 1 ಮತ್ತು 2 ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈ ವೇಳೆ ಇತರೆ ವರ್ಗದವರು ಬಿಡ್ ಮಾಡಲು ಮುಂದಾದಾಗ ಬಿಡ್‌ದಾರ ಗಣೇಶ್ ಆಕ್ಷೇಪ ವ್ಯಕ್ತಪಡಿಸಿ, ಈ ಮಳಿಗೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇತರೆ ವರ್ಗದವರು ಬಿಡ್‌ನಲ್ಲಿ ಭಾಗವಹಿಸಿದ್ದಾರೆ. ಅವರ ಜಾತಿ ದೃಢೀಕರಣ ಪತ್ರ ಪರಿಶೀಲಿಸಿ ಅವರಿಗೆ ಬಿಡ್ ಮಾಡಲು ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಅವರನ್ನು ಬಿಡ್‌ನಿಂದ ಹೊರಗಿಡಬೇಕು ಎಂದರು.
ಇದೇ ರೀತಿ ಅಂಗವಿಕಲರಿಗೆ ಮೀಸಲಾಗಿದ್ದ ಮಳಿಗೆಗಳನ್ನು ಅಂಗವಿಕಲರೇ ಬಿಡ್ ಮಾಡಬೇಕು ಎನ್ನುವ ಆಕ್ಷೇಪ ವ್ಯಕ್ತವಾಯಿತು. ಬಿಡ್ ಮಾಡಲು ಅಂಗವಿಕಲರಿಗೆ ಮಹಡಿ ಮೇಲೆ ಬರಲು ಸಾಧ್ಯವಿಲ್ಲದ ಕಾರಣ ಅವರ ಕುಟುಂಬ ವರ್ಗದವರು ಕೂಗಲು ಅವಕಾಶ ನೀಡಬೇಕು ಎಂದು ಬಿಡ್‌ದಾರ ಪುನೀತ್ ಮನವಿ ಮಾಡಿದರು. ಇದಕ್ಕೆ ಸಹಮತ ವ್ಯಕ್ತವಾಗಿ ಅವಕಾಶ ಕಲ್ಪಿಸಲಾಯಿತು.
ಬಿಡ್ ಪ್ರಕ್ರಿಯೆ ಆರಂಭಗೊಂಡ ನಂತರ ಮಳಿಗೆಗಳು ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಹರಾಜುಗೊಂಡವು. ಈ ಮೊದಲು ಎಲ್ಲ ಮಳಿಗೆಗಳು ಕೇವಲ 3 ರಿಂದ 4 ಸಾವಿರ ರೂ.ಬಾಡಿಗೆ ಪಾವತಿಸುತ್ತಿದ್ದರು. ಈ ಬಾರಿ ಎಲ್ಲ ಮಳಿಗೆಗಳು 6 ರಿಂದ 19 ಸಾವಿರದವರೆಗೆ ಹರಾಜುಗೊಂಡವು. ಸರ್ಕಾರದ ನಿಯಮದಂತೆ ಬಾಡಿಗೆ ಮೊತ್ತಕ್ಕೆ ಶೇ.18 ಜಿಎಸ್‌ಟಿ ಸೇರ್ಪಡೆಯಾಗಲಿದೆ. ಸಾಮಾನ್ಯ ವರ್ಗಕ್ಕೆ 6 ಮಳಿಗೆಗಳು, ಅಂಗವಿಕಲರಿಗೆ 2 ಮತ್ತು ಪರಿಶಿಷ್ಟ ಪಂಗಡಕ್ಕೆ 1ಮಳಿಗೆಗಳು ಮೀಸಲಾಗಿದ್ದವು.
ಪುರಸಭೆ ಪ್ರಭಾರ ಅಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ರಾಜು, ಬಿ.ಕೆ.ಶಶಿಧರ್, ಮಾನಿಕ್ ಬಾಷಾ, ಭಾಗ್ಯಲಕ್ಷ್ಮಿ ಇದ್ದರು.