ತಂಡ ಕಟ್ಟಿಕೊಂಡು ಹಣ ವಸೂಲಿ 10 ಜನರ ಬಂಧನ

10 people arrested for forming a gang and extorting money
Published on

ರಬಕವಿ/ಬನಹಟ್ಟಿ: ವ್ಯಕ್ತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ 10 ಜನರ ತಂಡವೊಂದನ್ನು ಪೊಲೀಸರು ಬುಧವಾರ ಬೆಳಗ್ಗೆ ಬನಹಟ್ಟಿಯಲ್ಲಿ ಬಂಧಿಸಿದ್ದಾರೆ.

ಶಿವಲಿಂಗ ಗೊಂಬಿಗುಡ್ಡ, ಪ್ರಶಾಂತ ನಾಯಕ, ರವಿ ಕರಿಶೆಟ್ಟಿ, ಈಶ್ವರ ಹೊಸೂರ, ಪ್ರದೀಪ ದೇಶಪಾಂಡೆ, ಸಂಗಪ್ಪ ಮಾದರ, ದಾನಪ್ಪ ಶಿರೋಳ, ನರಸಿಂಹ ಗಡಕರ, ದಾನೇಶ ಭಜಂತ್ರಿ, ಮಂಜುನಾಥ ವಿ.ಎಂ. ಬಂಧಿತರು.

ತಾಲೂಕಿನ ನಾವಲಗಿ ಗ್ರಾಮದ ಯಮನಪ್ಪ ಮಂಟೂರ ಅವರನ್ನು ಪೀಡಿಸಿ ಹಣ ವಸೂಲಿ ಮಾಡುತ್ತಿದ್ದರು. ಇತ್ತೀಚೆಗೆ ಹಣ ನೀಡಲಿಲ್ಲ ಎಂದು ಜಾತಿ ನಿಂದನೆ ಮಾಡಿ, ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಪ್ರಯತ್ನಿಸುವುದರ ಜತೆಗೆ ಮನೆಯಲ್ಲಿನ 3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಸಂತ್ರಸ್ತನ ಪತ್ನಿ ಚಂದ್ರವ್ವ ಯಮನಪ್ಪ ಮಂಟೂರ ದೂರು ದಾಖಲಿಸಿದ್ದಾರೆ.

ಯಮನಪ್ಪ ಮಂಟೂರ ಅವರನ್ನು ಜ.26ರಿಂದ ನಿರಂತರವಾಗಿ ಬನಹಟ್ಟಿಯ ನಗರಸಭೆ ಎದುರಿನ ಖಾಸಗಿ ಯುಟ್ಯೂಬ್ ಕಚೇರಿಯಲ್ಲಿ ಹಣಕ್ಕಾಗಿ ಪೀಡಿಸಲಾಗುತ್ತಿತ್ತು. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಿ ವಿಷ ಸೇವಿಸಿ ಕಳೆದೊಂದು ವಾರದಿಂದ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆತನ ಪತ್ನಿ ತಿಳಿಸಿದ್ದಾರೆ.

ಪತ್ನಿಯ ದೂರಿನನ್ವಯ 10 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಯುವಕರು ತಾಲೂಕಿನಲ್ಲಿ ಜನರನ್ನು ಹೆದರಿಸುವುದು, ಸಂಘಗಳನ್ನು ಕಟ್ಟುವುದು, ಹಣ ವಸೂಲಿ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಈ. ಶಾಂತವೀರ ಹಾಗೂ ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net