ನೌಕರರ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ

HKR emplo
Published on

ಹಿರೇಕೆರೂರ: ಯಾವುದೇ ಸಂಘಟನೆ ನಿರಂತರವಾಗಿ, ನ್ಯಾಯ ಸಮ್ಮತವಾಗಿ ಕ್ರಿಯಾಶೀಲವಾಗಿದ್ದರೆ ಮಾತ್ರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ತರಳಬಾಳು ಸಾಂಸ್ಕೃತಿಕ ಕೇಂದ್ರದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೌಕರರು ಉತ್ತಮವಾಗಿ ಸೇವೆ ಸಲ್ಲಿಸಿದರೆ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆ ಪರಿಹರಿಸಲು ಸದಾ ಸಿದ್ಧನಿದ್ದೇನೆ. ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಧ್ವನಿಯಾಗುವ ಮೂಲಕ ಸಂಘಗಳು ಕಾರ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಿಸಲು 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, 2025 ಎನ್‌ಪಿಎಸ್‌ನಿಂದ ಒಪಿಎಸ್ ಹೋರಾಟದ ವರ್ಷವಾಗಿದ್ದು, ಈ ಬಗ್ಗೆ ರಾಜ್ಯ ಸಂಘ ಚಿಂತನೆ ನಡೆಸಿದೆ. ಹೋರಾಟಕ್ಕೆ ಎಲ್ಲ ನೌಕರರು ಸನ್ನದ್ಧರಾಗಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ ಅಧ್ಯಕ್ಷತೆ ಹಿಸಿದ್ದರು. ಹಾವೇರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ದಾವಣಗೆರೆ ಜಿಲ್ಲಾಧ್ಯಕ್ಷ ವೀರೇಶ ಬಡೆನಪುರ, ಡಾ.ಎಸ್.ಪಿ. ಗೌಡರ, ಬಸನಗೌಡ ಕೋಣ್ತಿ, ರಾಜ್ಯ ಪರಿಷತ್ ಸದಸ್ಯ ನಾಗರಾಜ ಕಟ್ಟಿಮನಿ, ಖಜಾಂಚಿ ಶಿವಕುಮಾರ ಬಂಗೇರ, ಕಾರ್ಯದರ್ಶಿ ನಂಜುಂಡಪ್ಪ ಇತರರು ಇದ್ದರು.

ನಾಗರಾಜ ಪುರದ, ಕುಮಾರ ಮಾನೇರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net