

ವಿಜಯಪುರ: ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿದ್ಧಸಿರಿಯ ಆಡಳಿತ ಮಂಡಳಿ ರ್ನಿಣಯದಂತೆ ವಿಜಯಪುರ ನಗರ ವಿಧಾನಸಭಾ ವ್ಯಾಪ್ತಿಯಲ್ಲಿರುವ ಗಿಡಗಳನ್ನು ಬೆಳೆಸುವ ಜತೆಗೆ ಸಂರಕ್ಷಣೆಗಾಗಿ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ 10 ಲಕ್ಷ ರೂ. ಗಳ ದೇಣಿಗೆ ಚೆಕ್ನ್ನು ಬುಧವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾವ ಅಣ್ಣಿಗೇರಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯು ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ನಿರಂತರವಾಗಿ ಸಾಮಾಜಿಕ ಕಾರ್ಯಗಳು ಮಾಡುತ್ತಲಿದೆ. ಕೋವಿಡ್ ಸಮಯದಲ್ಲಿ ಜಿಲ್ಲಾಡಳಿತದೊಂದಿಗೆ ಜತೆಗೂಡಿ ಲಸಿಕಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರದ ವಿವಿಧ ಬಡಾವಣೆಯ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಲು ಜಾಗೃತಿ ಮೂಡಿಸಿತ್ತು ಎಂದರು.
ಅದರ ಮುಂದುವರಿದ ಭಾಗವಾಗಿ ಪರಿಸರ ಸಂರಕ್ಷಣೆಗಾಗಿ ಕಳೆದ ಬಾರಿಯೂ ಟ್ರೀ ಗಾರ್ಡ್ ವ್ಯವಸ್ಥೆ ಕಲ್ಪಿಸಲು 10 ಲಕ್ಷ, ವೃಕ್ಷೋಥಾನ ಅಭಿಯಾನಕ್ಕೆ 10 ಲಕ್ಷ ರೂ. ದೇಣಿಗೆ ನೀಡಲಾಗಿತ್ತು. ಸದ್ಯ ನಗರದಲ್ಲಿ ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಿಸಲು 10 ಲಕ್ಷ ರೂ. ಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಆಡಳಿತ ಮಂಡಳಿಯ ಸಾಮಾಜಿಕ ಸೇವೆ, ಕಳಕಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ತಿಳಿಸಿದ ಅವರು ಮಳೆಗಾಲದ ವೇಳೆ 10 ಸಾವಿರ ಸಸಿಗಳನ್ನು ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಸಿದ್ಧರಿಯ ಜನರಲ್ ಮ್ಯಾನೇಜರ್ ದೇವಿ ಹಿರೇಮಠ, ಉಮೇಶ ಹರಿವಾಳ, ರಾಜಶೇಖರ ಪಾಟೀಲ, ಎಜಿಎಂ ಶಿವಕುಮಾರ ಕಬ್ಬಿನ, ಸಂದೀಪ ಗುಡೂರ, ಪವನ ಕುಲಕರ್ಣಿ, ಬಾಬುಗೌಡ ರೋಡಗಿ ಮತ್ತಿತರರಿದ್ದರು.