

ಮಂಡ್ಯ: ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನ ಕುಟುಂಬಕ್ಕೆ ಅಂಚೆ ಇಲಾಖೆಯಲ್ಲಿ ಮಾಡಿಸಿದ್ದ ಅಪಘಾತ ವಿಮೆ ನೆರವಾಗಿದೆ. 399 ರೂ ಪಾವತಿಸಿ ವಿಮೆ ಪಡೆದಿದ್ದ ಹಿನ್ನೆಲೆಯಲ್ಲಿ 10 ಲಕ್ಷ ರೂ ಪರಿಹಾರ ದೊರಕಿದೆ.
ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಅಪಘಾತ ವಿಮೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಅಂಚೆ ಇಲಾಖೆ ಸಿಬ್ಬಂದಿ ದಿವ್ಯಶ್ರೀ ಎಂಬುವರು 2023 ಮೇ ತಿಂಗಳಲ್ಲಿ ವಿಮೆ ಬಗ್ಗೆ ಮಾಹಿತಿ ಮೂಡಿಸುವ ಸಮಯದಲ್ಲಿಯೇ ಮಂಡ್ಯದ ಗಾಂಧಿನಗರ ನಿವಾಸಿ ಕೇಶವ(56) ಎಂಬುವರು ಆಸಕ್ತಿ ತೋರಿಸಿದ್ದರು. ಜತೆಗೆ 399 ರೂ ಪಾವತಿಸಿ ಒಂದು ಪಾಲಿಸಿಯನ್ನು ಮಾಡಿಸಿದ್ದರು.
ದುರಾದೃಷ್ಟವಶಾತ್ ಕೇಶವ ಅವರು ಕಳೆದ ಮೇ ತಿಂಗಳಲ್ಲಿ ಮಂಡ್ಯದಿಂದ ಮೈಸೂರು ರೈಲಿನಲ್ಲಿ ತೆರಳುತ್ತಿದ್ದಾಗ ಬಿದ್ದು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಕೇಶವ ಅವರು ಮಾಡಿಸಿದ್ದ ಪಾಲಿಸಿ, ಮರಣ ನೋಂದಣಿ ಪತ್ರ, ಎಫ್‌ಐಆರ್ ಹಾಗೂ ಶವಪರೀಕ್ಷೆ ದಾಖಲೆಯನ್ನು ಅಂಚೆ ಇಲಾಖೆಗೆ ಸಲ್ಲಿಸಿದ್ದರು. 23 ದಿನದ ಅವಧಿಯಲ್ಲಿಯೇ 10 ಲಕ್ಷ ರೂ ಕುಟುಂಬದವರ ಕೈ ಸೇರಿದೆ. ಅಂಚೆ ಇಲಾಖೆಯಲ್ಲಿ ಮಾಡಿಸಿದ ಅಪಘಾತ ವಿಮೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರಿಹಾರ ವಿತರಿಸಿದ ಒಂಭತ್ತನೇ ಪ್ರಕರಣ ಇದಾಗಿದೆ.
ನಗರದ ಗಾಂಧಿಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕುಟುಂಬದವರಿಗೆ ಚೆಕ್ ವಿತರಿಸಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಇದು ಅಂಚೆ ಇಲಾಖೆಯಿಂದ ನಡೆಯುತ್ತಿರುವ ಒಂದು ಸಮಾಜಮುಖಿ ಕಾರ್ಯಕ್ರಮವೆಂದು ಭಾವಿಸುತ್ತೇನೆ. ಕಡಿಕೆ ಮೊತ್ತ ಪ್ರೀಮಿಯಂ ಪಾವತಿಸಿ ಅಪಘಾತ ವಿಮಾ ಪಾಲಿಸಿ ಪಡೆದ ವ್ಯಕ್ತಿ ಅಪಘಾತದಲ್ಲಿ ನಿಧನರಾಗಿರುವುದರಿಂದ 10 ಲಕ್ಷ ರೂ ಪರಿಹಾರ ನೀಡಲಾಗಿದೆ. ಈ ಅಪಘಾತ ವಿಮಾ ಸೌಲಭ್ಯವನ್ನು ಎಲ್ಲ ಸಾರ್ವಜನಿಕರು ಪಡೆದುಕೊಳ್ಳಬೇಕು. ಇಂತಹ ಪಾಲಿಸಿಗಳು ಕುಟುಂಬಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ವಿಮೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಮಂಡ್ಯ ಅಂಚೆ ಅಧೀಕ್ಷಕ ಎಂ.ಲೋಕನಾಥ, ಉಪ ಅಂಚೆ ಅಧೀಕ್ಷಕ ರಾಜು, ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಕರ್ನಾಟಕ ವಲಯದ ಮ್ಯಾನೇಜರ್ ದಿವಾಕರ್, ಮಾರುಕಟ್ಟೆ ಕಾರ್ಯನಿರ್ವಾಹಕ ಟಿ.ಆರ್.ಗೌಡ, ನಾಗರಾಜು, ಭಾಸ್ಕರ್, ಸುಧೀರ್ ಇತರರಿದ್ದರು.