10 ವರ್ಷದಲ್ಲಿ 580 ಸಾವು!

26MDLG1
2023ರಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕಾರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Published on

ಮೂಡಲಗಿ: ಒಂದು ದಶಕ, ಮೂರು ಸಾವಿರಕ್ಕಿಂತ ಅಕ ಅಪಘಾತ, 580 ಸಾವು, 2000ಕ್ಕಿಂತಲೂ ಹೆಚ್ಚು ಜನರಿಗೆ ಗಂಭೀರ ಗಾಯ, ಕೆಲವರು ಶಾಶ್ವತ ಅಂಗವೆಕಲ್ಯಕ್ಕೆ ತುತ್ತಾಗಿ ಮರಣ ಶಯ್ಯೆ...

ಇದು ಪಟ್ಟಣ ಸಮೀಪ ಹಾದು ಹೋಗಿರುವ 108 ಕಿಮೀ ಉದ್ದದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ದಶಕಗಳಲ್ಲಿ ಸಂಭವಿಸಿದ ಸಾವು-ನೋವುಗಳ ಆರ್ತನಾದ.

ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವದ್ಧಿ ಯೋಜನೆ (ಕೆಎಸ್‌ಎಚ್‌ಐಪಿ) ಅಡಿಯಲ್ಲಿ ಅಂದಾಜು 437 ಕೋಟಿ ರೂ. ಅನುದಾನದಲ್ಲಿ 2014 ಡಿಸೆಂಬರ್‌ನಲ್ಲಿ ಈ ಹೆದ್ದಾರಿ ಆರಂಭಗೊಂಡಿದೆ. ಆವಾಗಿನಿಂದ ಇಲ್ಲಿ ನಿತ್ಯ ವಾಹನಗಳ ಸಂಚಾರ ವಿಪರೀತವಾಗಿದೆ. ಇದೇ ಕಾರಣಕ್ಕೆ 2014 ಡಿಸೆಂಬರ್‌ರಿಂದ 2024 ಡಿಸೆಂಬರ್‌ವರೆಗೆ 580ಕ್ಕೂ ಅಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಸಾವಿನ ದಾರಿ: ಮೂಡಲಗಿ ಸಮೀಪ ಹಾದು ಹೋಗುವ ಜತ್-ಜಾಂಬೋಟಿ ರಾಜ್ಯ ಹೆದ್ದಾರಿಯು 9 ಮೀಟರ್ ವಿಸ್ತೀರ್ಣವಿದೆ. ಆದರೆ, ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯು 9 ಮೀಟರ್ ರಸ್ತೆ ಅಗಲೀಕರಣವಾಗಬೇಕಿತ್ತು. ಆದರೆ 7 ಮೀಟರ್ ರಸ್ತೆ ನಿರ್ಮಾಣವಾಗಿದೆ ಹಾಗೂ ರಸ್ತೆಯ ಎರಡು ಬದಿಯಲ್ಲಿ ಇರಬೇಕಾದ ಮೂರು ಮೀಟರ್ ಬೆಕ್ ಹಾಗೂ ಪಾದಚಾರಿಗಳಿಗೆ ಬೇಕಿರುವ ರಸ್ತೆಗಳಿಲ್ಲ. ಹೀಗಾಗಿ ಪಾದಚಾರಿಗಳು ರಸ್ತೆ ಪಕ್ಕದಲ್ಲೇ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಇದರ ಪರಿಣಾಮ ಅಪಘಾತಗಳು ಹೆಚ್ಚಾಗಿ ಸಾವು-ನೋವುಗಳು ಸಂಭವಿಸುತ್ತಿವೆ.

ಹಂಪ್ಸ್ ಇಲ್ಲದೇ ಅಪಘಾತ ಹೆಚ್ಚಳ: ಗ್ರಾಮ ಹಾಗೂ ನಗರಗಳಲ್ಲಿ ಹಾದು ಹೋಗಿರುವ ರಸ್ತೆ ಮಾರ್ಗದ ಕ್ರಾಸ್‌ಗಳಲ್ಲಿ ಹಂಪ್ಸ್‌ಗಳಿಲ್ಲ. ಈ ಕಾರಣಕ್ಕೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇದರಿಂದ ತಿರುವುಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಎಲ್ಲ ಮಾಹಿತಿ ಗೊತ್ತಿದ್ದರೂ ಅಕಾರಿಗಳು ಮಾತ್ರ ರಸ್ತೆಯಲ್ಲಿ ಹಂಪ್ಸ್ ಅಳವಡಿಸುವ ಕಾರ್ಯ ಮಾಡುತ್ತಿಲ್ಲ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ತುರ್ತು ಸೇವೆ ಅವಶ್ಯಕ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ನಾಸ್ಕಿದ ಅಶೋಕ ಬಿಲ್ಡಕಾನ್ ಪಿವಿಜಿ ಲಿಮಿಟೆಡ್ ಕಂಪನಿ ನಿರ್ಮಾಣ ಮಾಡಿದೆ. 10 ವರ್ಷಗಳ ಅವಗೆ ಗುತ್ತಿಗೆ ಪಡೆದಿತ್ತು. ಮೂಡಲಗಿ ತಾಲೂಕಿನ ಹಳ್ಳೂರ ಹಾಗೂ ಚಿಕ್ಕೋಡಿ ತಾಲೂಕಿನ ಉಮ್ರಾಣಿಯಲ್ಲಿ ತನ್ನ ಕಚೇರಿ ತೆರೆದು ಈ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಸೇವೆ ನೀಡುತ್ತಿತ್ತು. 2024ಕ್ಕೆ ಗುತ್ತಿಗೆ ಅವ ಮುಗಿದಿರುವ ಕಾರಣಕ್ಕೆ ತುರ್ತು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದರೆ

ತುರ್ತು ವೈದ್ಯಕೀಯ ಸೇವೆ ಸಿಗದೇ ಸಾವು-ನೋವುಗಳು ಹೆಚ್ಚಿವೆ. 2025 ಜನವರಿ ಹಾಗೂ ಫೆಬ್ರವರಿ ಎರಡು ತಿಂಗಳಲ್ಲಿ 29 ಅಪಘಾತಗಳು ಸಂಭವಿಸಿ ಇಬ್ಬರು ಮೃತಪಟ್ಟು, 8 ಜನರು ಗಂಭೀರ ಗಾಯಗೊಂಡಿದ್ದಾರೆ. ಹೀಗಾಗಿ ಈ ಹೆದ್ದಾರಿಯಲ್ಲಿ ತುರ್ತು ಸೇವೆ ಒದಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

| ಮಲ್ಲು ಬೋಳನ್ನವರ ಮೂಡಲಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net