

ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಭರ್ತಿ ಆಗಲು ಇನ್ನು 10 ಅಡಿಯಷ್ಟೇ ಬಾಕಿ ಇದೆ. ಸಾಮಾನ್ಯವಾಗಿ ಜೂನ್ ಅಂತ್ಯಕ್ಕೆ ಈ ಮಟ್ಟವನ್ನು ತಲುಪುತ್ತಿದ್ದ ನೀರು ಈ ವರ್ಷ ಜುಲೈ ಮೊದಲ ವಾರದಲ್ಲಿ ಗುರಿ ಮುಟ್ಟಿದೆ. ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಒಂದು ವೇಳೆ ವರುಣ ಅಬ್ಬರಿಸಿದರೆ ಇನ್ನು 2 ದಿನಗಳಲ್ಲಿ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಲಿದೆ.
ಜಿಲ್ಲೆಯ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಸೇರಿದಂತೆ ಹಾರಂಗಿಯ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹಾಗಾಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಏರಿಕೆ ಆಗಿದ್ದು, ನಿಧಾನಕ್ಕೆ ನೀರಿನ ಮಟ್ಟ ಹೆಚ್ಚಳ ಆಗುತ್ತಿದೆ. ಕಳೆದ 3 ದಿನಗಳ ಹಿಂದೆ ಒಳಹರಿವು ಸುಮಾರು 5 ಸಾವಿರ ಕ್ಯೂಸೆಕ್ ದಾಟಿತ್ತು. ಇದು ಹೀಗೆಯೇ ಮುಂದುವರಿದಿದ್ದರೆ ಈಗಾಗಲೇ ಜಲಾಶಯ ಭರ್ತಿ ಆಗಿರುತ್ತಿತ್ತು. ಆದರೆ ಮಳೆ ಇಳಿಮುಖ ಆಗಿರುವುದರಿಂದ ಒಳಹರಿವಿನ ಪ್ರಮಾಣದಲ್ಲೂ ಇಳಿಕೆ ಆಗಿದ್ದು, ಜಲಾಶಯದ ನೀರಿನ ಮಟ್ಟ ನಿಧಾನಕ್ಕೆ ಏರುತ್ತಿದೆ.
2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಸೋಮವಾರದ ಮಾಹಿತಿ ಪ್ರಕಾರ 2,848.76 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2,833.73 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 2,394 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಾಲುವೆಗೆ ಯಾವುದೇ ನೀರು ಬಿಡುತ್ತಿಲ್ಲ. ಕಳೆದ ವರ್ಷ ಇದೇ ದಿನ 1,671 ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇತ್ತು. ನದಿಗೆ 50 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 4.891 ಟಿಎಂಸಿ ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 2.778 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ನೀರಿತ್ತು.
2022ರ ಮುಂಗಾರಿಗೆ ಹೋಲಿಸಿದರೆ 2023ರ ಮುಂಗಾರು ಕೊಡಗಿನಲ್ಲಿ ನಿರೀಕ್ಷೆಯಂತೆ ಇರಲಿಲ್ಲ. ಮಳೆಯ ಪ್ರಮಾಣ ಸಾಧಾರಣಕ್ಕಿಂತ ತುಂಬಾ ಕಡಿಮೆ ಇತ್ತು. 2022ರಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿತ್ತು. ಆದರೆ 2023ರ ಮುಂಗಾರಿನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹೆಗ್ಗಳಿಕೆಯ ಹಾರಂಗಿಯಲ್ಲಿ 2022ಕ್ಕಿಂತಲೂ ಅಧಿಕ ನೀರಿನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಜೀವನದಿ ಕಾವೇರಿ ವಾಲ್ನೂರು ಬಳಿಯಿಂದ ತನ್ನ ಹರಿವು ಕ್ಷೀಣಿಸಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿಯೇ ಇತ್ತು. ಹಾಗಾಗಿ ಈ ಮಳೆಗಾಲದಲ್ಲಿ ಬೇಗನೇ ಹಾರಂಗಿ ಭರ್ತಿ ಆಗುವ ಹಂತ ತಲುಪಿದೆ.
ಒಂದು ವೇಳೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಅಣೆಕಟ್ಟೆಯ ಕೆಳಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಲಾಶಯದಲ್ಲಿ ನೀರಿನ ಮಟ್ಟವನ್ನು 2,854 ಅಡಿಗೆ ಸೀಮಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ 2,850 ಅಡಿ ತಲುಪುವ ತನಕ ಅಣೆಕಟ್ಟೆಯಲ್ಲಿ ನೀರಿನ ಏರಿಕೆ ಪ್ರಮಾಣ ನಿಧಾನಗತಿಯಲ್ಲಿ ಇರುತ್ತದೆ. ನಂತರ ಇದು ವೇಗ ಪಡೆಯುತ್ತದೆ ಎನ್ನುತ್ತಾರೆ ಅಣೆಕಟ್ಟೆಯ ಅನುಭವಿ ಸಿಬ್ಬಂದಿ ವರ್ಗ. ಹಾಗಾಗಿ ನೀರಿನ ಮಟ್ಟ 2,850 ಅಡಿ ತಲುಪುತ್ತಿದ್ದಂತೆಯೇ ನದಿಗೆ ಹರಿಸಲಾಗುತ್ತಿದೆ.
2018ರಲ್ಲಿ ಕುಶಾಲನಗರ ಮತ್ತು ಸುತ್ತಲಿನ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಹಾರಂಗಿ ಅಣೆಕಟ್ಟೆಯಲ್ಲಿನ ಅವೈಜ್ಞಾನಿಕ ನೀರಿನ ನಿರ್ವಹಣೆಯೇ ಕಾರಣ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಅಣೆಕಟ್ಟೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ನೀರಿನ ನಿರ್ವಹಣೆಗೆ ಆದ್ಯತೆ ಕೊಡುತ್ತಿದ್ದಾರೆ. ಇದರಿಂದಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದ ಅಧಿಕಾರಿಗಳು ಮಳೆಗಾಲದ ಅವಧಿಯಲ್ಲಿ ಅಣೆಕಟ್ಟೆ ಭರ್ತಿ ಆಗಲು ಇನ್ನು 10 ಅಡಿಗಳಷ್ಟು ಬಾಕಿ ಇರುವಂತೆಯೇ ನದಿಗೆ ನೀರು ಹರಿಸಲು ಪ್ರಾರಂಭಿಸುತ್ತಾರೆ.
ಜಲಾಶಯ ಭರ್ತಿ ಆಗುತ್ತಿರುವದುರಿಂದ ಆದಷ್ಟು ಶೀಘ್ರ ಕಾಲುವೆಗಳಿಗೆ ಕೂಡ ನೀರು ಹರಿಸಲಾಗುತ್ತಿದೆ. ಕೊಡಗು, ಮೆಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಹಾರಂಗಿ ಅಣೆಕಟ್ಟೆಯ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇಷ್ಟು ಜಾಗದಲ್ಲಿ ಸಮದ್ಧವಾಗಿ ಬೆಳೆ ತೆಗೆಯಬೇಕು ಅಂದರೆ 15 ಟಿಎಂಸಿ ನೀರಿನ ಅಗತ್ಯ ಇದೆ. 8.5 ಟಿಎಂಸಿ ನೀರಿನ ಸಮಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ತುಂಬಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹಾಗೆಯೇ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಜಲಾಶಯವು ಶೀಘ್ರವೇ ಗರಿಷ್ಠ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು.
ಪುಟ್ಟಸ್ವಾಮಿ, ಕಾರ್ಯಪಾಲಕ ಎಂಜಿನಿಯರ್, ಹಾರಂಗಿ ಪುನರ್ವಸತಿ ವಿಭಾಗ