

ಬೆಂಗಳೂರು:ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ.ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣಗುರು’ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಈಗಾಗಲೇ ನಿಗಮವನ್ನು ಘೋಷಿಸಿದೆ. ಆದರೆ, ಈವರೆಗೂ ಕಂಪನಿ ಆ್ಯಕ್ಟ್‌ನಲ್ಲಿ ನೋಂದಣಿಯಾಗಿಲ್ಲ. ಶೀಘ್ರದಲ್ಲೇ ನೋಂದಾಯಿಸಬೇಕು.ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ಇರಿಸಿರುವ 10 ಕೋಟಿ ರೂ.ಹಣವನ್ನು ನಿಗಮಕ್ಕೆ ನೀಡಲಾಗುವುದು. ಈಡಿಗರ ಸಂಘ ಸಮುದಾಯ ಭವನ ನಿರ್ಮಾಣಕ್ಕಾಗಿ 10 ಎಕರೆ ಜಮೀನು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುತ್ತೇನೆ. ಈಡಿಗ ಸಮುದಾಯದವರಿಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುನ್ನು ಕೂಡ ನಮ್ಮ ಸರ್ಕಾರ ನೀಡಲಿದೆ ಎಂದರು.
ನಾರಾಯಣ ಗುರು ಚಿಂತನೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಡಿಕೊಳ್ಳಬೇಕಿದೆ. ಕೇರಳದಲ್ಲಿ ಜನಿಸಿದ್ದರೂ ಯಾವುದೇ ಧರ್ಮ, ಜಾತಿ, ಪ್ರದೇಶಕ್ಕೆ ಅವರು ಸೀಮಿತವಾಗಿಲ್ಲ. ಅವರು ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಶೂದ್ರರನ್ನ ಪೂಜಾರಿಗಳನ್ನಾಗಿ ಮಾಡಿದ ಶ್ರೇಯಸ್ಸು ಅವರದ್ದಾಗಿದೆ. ಮೇಲ್ವರ್ಗದವರು ದೇವಸ್ಥಾನ ಪ್ರವೇಶ ನಿರಾಕರಿಸಿದಾಗ ಸಂಘರ್ಷಕ್ಕೆ ಇಳಿಯಲಿಲ್ಲ. ಬದಲಾಗಿ ಅವರು ಶೂದ್ರರಿಗಾಗಿಯೇ ದೇವಸ್ಥಾನ ನಿರ್ಮಾಣ ಮಾದಿದರು. ಜತೆಗೆ, ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಬದಲಾವಣೆ ತಂದರು. ಜಾತಿ ಬೇಧ ತೋರದೆ ಸಾಮಾಜದ ಏಳ್ಗೆಗೆ ಶ್ರಮಿಸಿದವರು ಎಂದು ಸಿಎಂ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ,ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ, ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಮತ್ತಿತರರಿದ್ದರು.
ರಾಜಕೀಯ ಗುರು ಬಂಗಾರಪ್ಪ:
ನಾನು ಎಸ್ಸೆಂ ಕೃಷ್ಣ ಅವರ ಶಿಷ್ಯ ಅಲ್ಲ. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಶಿಷ್ಯ. ಬಂಗಾರಪ್ಪ ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದಿದ್ದರು. ಚಿಕ್ಕ ವಯಸ್ಸಿನಲ್ಲಿ ಮಂತ್ರಿ ಸ್ಥಾನ ನೀಡಿದ್ದರು. ರಾಜಕೀಯವಾಗಿ ಬೆಳೆಯಲು ಅವರು ಕಾರಣ. ಕಾಂಗ್ರೆಸ್ ಬಿಟ್ಟು ಹೊಸ ಪಕ್ಷ ಸ್ಥಾಪಿಸುವಾಗ ನೀನು ಕೃಷ್ಣ ಜತೆಗೆ ಹೋಗು ಎಂದು ಸಲಹೆ ಕೊಟ್ಟವರು ಬಂಗಾರಪ್ಪ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಮರಿಸಿದರು. ಜನಾರ್ದನ ಪೂಜಾರಿಯವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರತಿ ಬಡವರಿಗೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿದ್ದಾರೆ ಎಂದರು.
ಈಡಿಗ ಸಮಾಜದಲ್ಲಿ ಸಾಧಕರಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ದತ್ತು, ವರನಟ ಡಾ.ರಾಜ್ಕುಮಾರ್, ಮಾಜಿ ಸಿಎಂ ಎಸ್.ಬಂಗಾರಪ್ಪ ನಮ್ಮ ಸಮುದಾಯದವರು. ನಾರಾಯಣಗುರು ನಿಗಮ ಮಂಡಳಿಗೆ ಅನುದಾನ ಮಂಜೂರು ಸೇರಿ ಸಮುದಾಯದ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತಾಗಬೇಕು.
ಮಧುಬಂಗಾರಪ್ಪ, ಸಚಿವ.