

ತುಮಕೂರು: ಅರಿವು ಶೈಕ್ಷಣಿಕ ಸಾಲ ಹಾಗೂ ನೇರ ಉದ್ಯೋಗ ಸಾಲಕ್ಕಾಗಿ ಸರ್ಕಾರವು 2019-20ನೇ ಸಾಲಿನ ಬಜೆಟ್‌ನಲ್ಲಿ ಆರ್ಯ ವೈಶ್ಯ ಸಮಾಜಕ್ಕಾಗಿ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಹೇಳಿದರು.
ನಗರದಲ್ಲಿ ಮಂಜೂರಾತಿ ಪತ್ರ ವಿತರಿಸಿದ ನಂತರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ 92 ಮಂದಿಗೆ 92 ಲಕ್ಷ ರೂಪಾಯಿ ಆರ್ಥಿಕ ನೆರವಿನ ಮಂಜೂರಾತಿ ಪತ್ರವನ್ನು ನಿಗಮದಿಂದ ವಿತರಿಸಿದ್ದು, ಜೂ.30ರೊಳಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದರು.
ನಿಗಮದ ಮೂಲಕ ಅರಿವು ಶೈಕ್ಷಣಿಕ ಸಾಲ ಹಾಗೂ ನೇರ ಉದ್ಯೋಗ ಸಾಲ ಯೋಜನೆಗಳನ್ನು ಜಾರಿಗೆ ತಂದು, ವ್ಯಾಸಂಗ ಮಾಡುತ್ತಿರುವ ಹಾಗೂ ವ್ಯಾಪಾರ ಮಾಡುವಂತಹ ಸಮಾಜದ ಕಡು ಬಡವರಿಗೆ ಧನ ಸಹಾಯ ಮಾಡುವಂತಹ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸರ್ಕಾರ ಕೂಡ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದೆ ಎಂದರು.
ಸಮುದಾಯದವರಿಗೆ ಕಳೆದ 1958ರಿಂದ ಜಾತಿ ಪ್ರಮಾಣ ನೀಡತ್ತಿರಲಿಲ್ಲ. ಆದರೆ, ಇದೀಗ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಎರಡೂ ಒಂದರಲ್ಲೇ ನೀಡಲಾಗುತ್ತಿದೆ. ಅರಿವು ಶೈಕ್ಷಣಿಕ ಸಾಲಕ್ಕಾಗಿ ಕಡಿಮೆ ಅರ್ಜಿಗಳು ಬಂದಿದ್ದು, ನೇರ ಉದ್ಯೋಗ ಸಾಲಕ್ಕೆ ರಾಜ್ಯಾದ್ಯಂತ 1650 ಅರ್ಜಿಗಳು ಬಂದಿವೆ. ಅದರಲ್ಲಿ 250 ಅರ್ಜಿಗಳು ಜಿಲ್ಲೆಯಿಂದಲೇ ಬಂದಿವೆ. ಈ ಎರಡು ಯೋಜನೆಗಳ ಮೂಲಕ 1 ಕೋಟಿಯನ್ನಾದರೂ ಜಿಲ್ಲೆಗೆ ನೀಡಿ ಕನಿಷ್ಠ 100 ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ನಿಗಮದ ಮೂಲಕ ಮಾಡಲಾಗುತ್ತಿದೆ ಎಂದರು.
ಪ್ರತಿ ಫಲಾನುಭವಿಗೆ 1 ಲಕ್ಷ ರೂಪಾಯಿ ನೀಡಲಾಗುವುದು. ಈ ಪೈಕಿ ಶೇ.20 ಸಬ್ಸಿಡಿ ದೊರೆಯಲಿದೆ. ಶೇ.4 ಬಡ್ಡಿ ದರದಲ್ಲಿ ಸಾಲ ಮರು ಪಾವತಿಸಬೇಕಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ಫಲಾನುಭವಿಗಳು ನಿಗಮಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು. ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಭಕ್ತ ಕುಚೇಲ ಹಾಜರಿದ್ದರು. ಸಮಾಜದ ಮುಖಂಡ ಶ್ರೀಧರ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.