ಕೃಷ್ಣೆಗೆ ಕೊಡುಗೆ; 10 ಸಾವಿರ ಕೋಟಿ ರೂ. ಭರವಸೆ

Yadiyurappa
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಒಂದು ಸಾಲೂ ಪ್ರಸ್ತಾಪವಾಗದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಇದೀಗ ಸರ್ಕಾರದಿಂದ ಭರ್ಜರಿ ಭರವಸೆ ಸಿಕ್ಕಿದೆ. ಸ್ವಪಕ್ಷೀಯರ ಒತ್ತಡ, ಅಸಮಾಧಾನಕ್ಕೆ ಸ್ಪಂದಿಸಿದ ಸಿಎಂ ಮೂರನೇ ಹಂತದ ಯೋಜನೆಗಾಗಿ 2020-21ನೇ ಆರ್ಥಿಕ ವರ್ಷದಲ್ಲಿ 10 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಘೋಷಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈಗ ಆರಂಭಿಸಿ 3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸುತ್ತೇನೆ. ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ, ಇಲ್ಲಿಯೂ ಅನುದಾನ ಕ್ರೋಡೀಕರಿಸಿ ಯೋಜನೆ ಆರಂಭಿಸುತ್ತೇವೆ ಎಂದರು.

ನೀರಾವರಿ ಇಲಾಖೆಗೆ 21 ಸಾವಿರ ಕೋಟಿ ರೂ. ಅನುದಾನವನ್ನು ಈ ವರ್ಷದ ಆಯವ್ಯಯದಲ್ಲಿ ಮಂಜೂರಾತಿಗಾಗಿ ಸದನದಲ್ಲಿ ಮಂಡಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಭಾಗದ ಜನಪ್ರತಿನಿಧಿಗಳು ಮತ್ತು ಜನರು ಆಯವ್ಯಯದಲ್ಲಿ ಪ್ರತ್ಯೇಕ ಅನುದಾನ ನೀಡಿಲ್ಲ ಎಂದು ಭಾವನೆ ವ್ಯಕ್ತಪಡಿಸಿದ್ದರು. ಯೋಜನೆ ವಿಚಾರವಾಗಿ ಅಧಿಕಾರಿಗಳ ಜತೆ ಒಂದೂವರೆ ಗಂಟೆ ರ್ಚಚಿಸಿದ್ದೇನೆ. ಹಣಕಾಸು ಕೊರತೆ ಬಗ್ಗೆ ಕೇಂದ್ರಕ್ಕೆ ತಿಳಿಸುತ್ತೇನೆ. ಹಣಕಾಸು ಹೊಂದಾಣಿಕೆ ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು.

ಹಣ ಎಲ್ಲಿದೆ?: ಸಿಎಂ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿದ್ದಾರೆ. ಆದರೆ 10 ಸಾವಿರ ಕೋಟಿ ರೂ. ಎಲ್ಲಿದೆ? ಎಂದು ಪ್ರಶ್ನಿಸಿದರು.

ಕೇವಲ ಭರವಸೆ ಆಗಬಾರದು, ನಾನು ಕೂಡ ಬಾಗಲಕೋಟೆ ಜಿಲ್ಲೆಯವನೇ. ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವವನೇ. 10 ಸಾವಿರ ಕೋಟಿ ರೂ. ಕೊಡುವುದಾಗಿ ಆ ಭಾಗದ ಜನರ ಮೂಗಿನ ಮೇಲೆ ತುಪ್ಪ ಸವರಬಾರದೆಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನ್ಯಾ.ಬ್ರಿಜೇಶ್ ಮಿಶ್ರಾ ಅವರಿದ್ದ ನ್ಯಾಯಾಧಿಕರಣದಿಂದ 173 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಆದೇಶ ಹೊರಬಂದು ಏಳು ವರ್ಷವಾಗಿದೆ. ಹಿಂದಿನ ಸರ್ಕಾರಗಳು ಒಂದು ಪೈಸೆಯನ್ನೂ ತೆಗೆದಿಡಲಿಲ್ಲ. 2012-13ರಲ್ಲಿ ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಪುನರ್ವಸತಿ ಮತ್ತು ಪುನರ್ ನಿರ್ವಣದ ಕೆಲಸಕ್ಕೆಂದು 17,207 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಡಲಾಗಿತ್ತು. ಆದರೆ, ಮುಂದೆ ಬಂದ ಸರ್ಕಾರಗಳು ಏನೂ ಮಾಡಲಿಲ್ಲವೆಂದರು.

ಡ್ಯಾಮನ್ನು 524 ಮೀಟರ್​ಗೆ ಎತ್ತರಿಸುವುದರಿಂದ ಲಕ್ಷಾಂತರ ಎಕರೆ ನೀರಾವರಿ ಮಾಡಬಹುದು. ಇಂಥ ತೀರ್ಮಾನ ಮಾಡಿದ ಮುಖ್ಯಮಂತ್ರಿಯವರನ್ನು ನೀವು ಅಭಿನಂದಿಸುತ್ತೀರೆಂದು ಭಾವಿಸಿದ್ದೆ ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಕಾರಜೋಳ ಹೇಳಿದರು.

‘ನಾನು ಟೀಕೆ ಮಾಡಿಲ್ಲ. ನಾನು ಬಾದಾಮಿ ಕ್ಷೇತ್ರದವನೇ, ಈ ಯೋಜನೆ ಆಗಬೇಕೆಂಬ ಕಾಳಜಿ ಇದೆ. ಆದರೆ, 10 ಸಾವಿರ ಕೋಟಿ ರೂ. ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪ ಮಾಡದೆ, ಬಜೆಟ್ ಮೇಲಿನ ಚರ್ಚೆಯಲ್ಲೂ ಪ್ರಸ್ತಾಪಿಸದೆ ಈಗ ಏಕಾಏಕಿ ಹೇಳಿದ್ದಾರೆ. ಇದನ್ನು ನಂಬಲು ಆಗಲ್ಲ. ಬಜೆಟ್​ನಲ್ಲಿ ಹಣ ಇಟ್ಟಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆ’ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಯೋಜನೆ ಹಿಂದೆ ಮುಂದೆ

  • ಆಲಮಟ್ಟಿಯ ಈಗಿನ ಎತ್ತರ 519.6 ಮೀಟರ್
  • ಎತ್ತರಿಸಲು ಇರುವ ಅವಕಾಶ 524.26 ಮೀಟರ್
  • ನೀರು ಸಂಗ್ರಹಣಾ ಸಾಮರ್ಥ್ಯ 123.08 ಟಿಎಂಸಿ ಫೀಟ್
  • ಎತ್ತರಿಸಿದ ಬಳಿಕ ಸಾಮರ್ಥ್ಯ 173 ಟಿಎಂಸಿ ಫೀಟ್
  • ಹೆಚ್ಚುವರಿಯಾಗಿ 10 ಲಕ್ಷ ಎಕರೆಗೆ ಅನುಕೂಲ
  • ಯೋಜನೆ ಭೂಸ್ವಾಧೀನಕ್ಕೆ 1.32 ಲಕ್ಷ ಎಕರೆ ಬೇಕು
  • 22 ಹಳ್ಳಿಗಳನ್ನು ಸ್ಥಳಾಂತರಗೊಳಿಸಿ ಪುನರ್ವಸತಿ ಕಲ್ಪಿಸಬೇಕು
  • ಭೂ ಸ್ವಾಧೀನ, ಪುನರ್ವಸತಿ ಸೇರಿ 53 ಸಾವಿರ ಕೋಟಿ ರೂ. ಬೇಕಾಗಬಹುದು
  • ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗೆ ಹೆಚ್ಚಿನ ಲಾಭ

ಕಾರಜೋಳ ಮುನಿಸಿಗೆ ಸಿಕ್ಕ ಫಲ ಬಜೆಟ್ ಮಂಡನೆ ಬಳಿಕ ಡಿಸಿಎಂ ಗೋವಿಂದ ಕಾರಜೋಳ ಮುನಿಸಿಕೊಂಡಿದ್ದರು. ಆ ಭಾಗದ ಶಾಸಕರೂ ಅಸಮಾಧಾನ ಹೊರಹಾಕಿದ್ದರು. ಬಜೆಟ್​ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ, ಹೀಗಾದರೆ ಕ್ಷೇತ್ರದ ಜನರಿಗೆ ಹೇಗೆ ಮುಖ ತೋರಿಸುವುದು ಎಂದು ಬೇಸರ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ತೀವ್ರತೆ ಅರಿತ ಸಿಎಂ, ತಕ್ಷಣ ಹಣಕಾಸು ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಮ್ಯಾರಥಾನ್ ಸಭೆ ನಡೆಸಿದ್ದರು.

ಬಜೆಟ್ ಮಂಡನೆ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗಾಗಿ 22 ಹಳ್ಳಿಗಳ ಪುನರ್ವಸತಿ, ಪುನರ್ ನಿರ್ವಣಕ್ಕಾಗಿ 10 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ಮಾಡಲಾಗುತ್ತದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧವಿದೆ. | ಬಿ.ಎಸ್.ಯಡಿಯೂರಪ್ಪ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net