10 ಕೋಟಿ ರೂ. ಅನುದಾನ ನೀಡಲು ಆಗ್ರಹ

5 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದೆಂದೂ ಕಾಣದಷ್ಟು ಭೀಕರ ಬರಗಾಲ ರಾಜ್ಯದಲ್ಲಿ ಎದುರಾಗಿದೆ. ಈ ಸಮಯದಲ್ಲಿ ರೈತರ ಕಣ್ಣೊರೆಸುವ ಕೆಲಸ ಮಾಡಬೇಕಿದ್ದ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಬರ ತಾಲೂಕುಗಳಿಗೆ ತಲಾ 10 ಕೋಟಿ ರೂ. ಅನುದಾನ ನೀಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು 5 ತಿಂಗಳಾಗಿದೆ. ಸರ್ಕಾರದ ಆಡಳಿತ ಸಂಪೂರ್ಣ ಕುಸಿದ್ದಿದೆ. ಹಿಂಗಾರು ಹಾಗೂ ಮುಂಗಾರು ಬೆಳೆ ಬಾರದೆ ರೈತರು ಕಂಗಾಲಾಗಿದ್ದರೂ, ಸರ್ಕಾರ ಮಾತ್ರ ಅತ್ತ ಗಮಹರಿಸುತ್ತಿಲ್ಲ ಎಂದು ದೂರಿದರು.
ರಾಜ್ಯದ ಅಭಿವೃದ್ಧಿ ಬಡವರ ಉದ್ಧಾರ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವೆಲ್ಲವನ್ನು ಮರೆತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ 234 ತಾಲೂಕುಗಳಲ್ಲಿ ಬರ ಎದುರಾಗಿದೆ. ಈ ಎಲ್ಲ ತಾಲೂಕುಗಳಲ್ಲಿನ ಜನ ಗುಳೆ ಹೋಗುವುದನ್ನು ತಡೆದು ಮೇವು ಬ್ಯಾಂಕ್ ಆರಂಭ, ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಸಬೇಕಿತ್ತು. ಆದರೆ ಈ ಕಾರ್ಯ ಮಾಡದ ಸರ್ಕಾರ ರಾಜಕಾರಣದಲ್ಲೇ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಜಿಲ್ಲೆಯ 68 ಕೆರೆಗಳನ್ನು ತುಂಬಿಸಲಾಗುತ್ತಿದೆ. ಕೂಡಲೇ ಸರ್ಕಾರ ಇದನ್ನು ಗಮನಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು. ಇದರಿಂದ ರೈತರಿಗೆ ಕೊಂಚ ಅನುಕೂಲವಾಗಲಿದೆ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಸಾಮಾಜಿಕ ನ್ಯಾಯ ನೆನಪಾಗುತ್ತಿಲ್ಲವೇ? ಎಂದು ಪ್ರಶ್ನಿಸಿದ ಕಾರಜೋಳ, ಗಿಮಿಕ್ ಮಾಡುತ್ತಲೇ ಆಡಳಿತ ನಡೆಸುತ್ತಿದ್ದಾರೆ ಎಂದರು.
ಸಚಿವರು, ಶಾಸಕರು ತಮ್ಮ ಭಾಗದ ಬರ ವೀಕ್ಷಣೆ ಮಾಡುವಂತೆ ಮುಖ್ಯಮಂತ್ರಿ ಹೇಳುವಂತಹ ಸ್ಥಿತಿ ಬಂದಿದೆ. ನಾವು ರಾಜ್ಯದ ಎಲ್ಲ ತಾಲೂಕುಗಳಲ್ಲಿ ಬರ ವೀಕ್ಷಣೆ ಮಾಡಿದ ಬಳಿಕ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ನಮ್ಮ ವರದಿಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ನಾಗರಾಜ ಛಬ್ಬಿ, ಮುಖಂಡರಾದ ಬಸವರಾಜ ಕುಂದಗೊಳಮಠ, ಷಣ್ಮುಖ ಗುರಿಕಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net