10 ಕೋಟಿ ರೂ. ಮೌಲ್ಯದ ಅಂಬರ್‌ಗ್ರೀಸ್ ವಶ, ಮೂವರ ಬಂಧನ

Amber Grees
Published on

ಕಾಸರಗೋಡು: ಕಾಞಂಗಾಡಿನ ವಸತಿಗೃಹವೊಂದಕ್ಕೆ ದಾಳಿ ನಡೆಸಿದ ಪೊಲೀಸರು 10 ಕೋಟಿ ರೂ. ಮೌಲ್ಯದ ಆಂಬರ್‌ಗ್ರೀಸ್(ತಿಮಿಂಗಿಲದ ವಾಂತಿ) ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಕಾಞಂಗಾಡು ನಿವಾಸಿಗಳಾದ ಸಿದ್ದಿಕ್ ಮಾಡಂಬಿಲ್ಲತ್, ನಿಶಾಂತ್ ಕೆ.ವಿ., ಕೊಟ್ಟೋಡಿ ನಿವಾಸಿ ದಿವಾಕರನ್ ಪಿ ಬಂಧಿತರು. ಜಿಲ್ಲಾ ಪೊಲೀಸ್ ಡಾ.ವೈಭವ್ ಸಕ್ಸೇನಾ ನೇತೃತ್ವದಲ್ಲಿ ನಡೆಯುತ್ತಿರುವ ‘ಆಪರೇಶನ್ ಕ್ಲೀನ್ ಕಾಸರಗೋಡು’ ಕಾರ್ಯಾಚರಣೆಯನ್ವಯ ಡಿಸಿಆರ್‌ಬಿ ಡಿವೈಎಸ್‌ಪಿ ಅಬ್ದುಲ್ ರಹೀಂ, ಕಾಞಂಗಾಡು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್, ಹೊಸದುರ್ಗ ಇನ್‌ಸ್ಪೆಕ್ಟರ್ ಪಿ.ಕೆ ಶೈನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

ತಿಮಿಂಗಿಲಗಳ ಹೊಟ್ಟೆಯಿಂದ ಹೊರಬರುವ ಮೇಣದಂತಹ ವಸ್ತುವಾದ ಅಂಬರ್‌ಗ್ರೀಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದ್ದು, ಸುಗಂಧ ದ್ರವ್ಯ ತಯಾರಿಗೆ ಬಳಕೆಯಾಗುತ್ತದೆ. ಭಾರತದಲ್ಲಿ ಆಂಬರ್‌ಗ್ರೀಸ್ ಬಳಕೆ ಹಾಗೂ ಮಾರಾಟವನ್ನು ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ಅಡಿ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net