

ಬಾಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
10 ಕೋಟಿ ರೂ. ಅನುದಾನ ಬಂದ ತಕ್ಷಣ ಗ್ರಾಮೀಣ ರಸ್ತೆಗಳ ಗುಂಡಿ ಮುಚ್ಚುವುದು, ಚರಂಡಿ ನಿರ್ಮಾಣ ಹಾಗೂ ಜಂಗಲ್ ಕ್ಲಿಯರ್ ಮಾಡಲಾಗುವುದು ಎಂದು ಸುದ್ದಿಗಾರರರಿಗೆ ತಿಳಿಸಿದರು. ತೀರಾ ಹದಗೆಟ್ಟ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗುವುದು.ಬಾಳೆಹೊನ್ನೂರು, ಮಾಗುಂಡಿ ರಸ್ತೆಯನ್ನು 20 ಕೋಟಿ ರೂ.ಅನುದಾನದಲ್ಲಿ ಮರು ಡಾಂಬರೀಕರಣ ಮಾಡಲಾಗುವುದು. ಮಾಗುಂಡಿ ಮುಖ್ಯರಸ್ತೆಯನ್ನು ಬಾಳೆಹೊನ್ನೂರು ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಅಶಯವಿದೆ. ಆದರೆ 2 ಕೋಟಿ ರೂ.ಅನುದಾನದ ಕೊರತೆಯಿದೆ. ಅನುದಾನ ದೊರೆತರೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಮುಂದಿನ ವರ್ಷದಲ್ಲಿ ಜಯಪುರ, ಎನ್.ಆರ್.ಪುರ ಅಗ್ರಹಾರದಿಂದ ಟಿ.ಬಿ.ಸರ್ಕಲ್ ರಸ್ತೆ ಅಭಿವೃದ್ಧಿಪಡಿಸಲಾಗುವುದು. ನಂತರ ಒಂದು ಅಥವಾ ಎರಡು ವರ್ಷದಲ್ಲಿ ಹರಿಹರಪುರ ರಸ್ತೆ ವಿಸ್ತರಣೆ, ಶೃಂಗೇರಿ ರಸ್ತೆ ವಿಸರಣೆ ಮಾಡಲಾಗುವುದು ಎಂದರು.
ಅತಿಯಾದ ಮಳೆಯಿಂದ ಅಡಕೆ ಬೆಳೆಗೆ ಹಾನಿಯಾದ ಬಗ್ಗೆ ಪರಿಹಾರ ಘೋಷಣೆಗಾಗಿ ಒತ್ತಾಯಿಸಿ ಶೀಘ್ರದಲ್ಲಿ ಅಡಕೆ ಬೆಳೆಗಾರರ ನಿಯೋಗದ ಜತೆ ಸಂಬಂಧಿಸಿದ ಸಚಿವರವನ್ನು ಭೇಟಿ ಮಾಡಲಾಗುವುದು. ಕೇಂದ್ರ ಸರ್ಕಾರ ಅತಿವೃಷ್ಟಿ ಪರಿಹಾರ ಘೋಷಣೆ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಕೆ ಬೆಳೆ ಹಾನಿ ಬಗ್ಗೆ ಪರಿಹಾರ ನೀಡುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡರು ಭರವಸೆ ನೀಡಿದ್ದಾರೆ ಎಂದರು.