11 ಪೊಲೀಸರು ಅಮಾನತು

Police
Published on

ಚಿಕ್ಕಮಗಳೂರು: ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗಿದ ಓರ್ವ ಪಿಎಸ್‍ಐ ಸೇರಿ ಹನ್ನೊಂದು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಅಕ್ರಮ ಬಂಧನ ಆರೋಪ

ಇತ್ತೀಚೆಗೆ ಮಲ್ಲೇನಹಳ್ಳಿ ಮೂಲದ ಇಬ್ಬರನ್ನು ಪ್ರಕರಣವೊಂದರ ತನಿಖೆ ಹೆಸರಿನಲ್ಲಿ ಠಾಣೆಗೆ ಕರೆತಂದು ಅವರ ಬಳಿ ಇದ್ದ ಎಟಿಎಂ ಕಾರ್ಡ್, ಬೈಕ್ ಕೀ, ಮೊಬೈಲ್, ಆಧಾರ್ ಕಾರ್ಡ್ ಹಾಗೂ ಪರ್ಸ್ ಅನ್ನು ಕಸಿದುಕೊಂಡು ಅಕ್ರಮವಾಗಿ ಬಂಧನದಲ್ಲಿರಿಸಿದರೆಂಬ ಆರೋಪ ಕೇಳಿ ಬಂದಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಸವನಹಳ್ಳಿ ಪಿಎಸ್‍ಐ ಸುತೇಶ್, ಕಾನ್‍ಸ್ಟೇಬಲ್‍ಗಳಾದ ಯುವರಾಜ, ಲಕ್ಷ್ಮಣ ಮತ್ತು ಪ್ರದೀಪ ಎಂಬುವವರನ್ನು ಅಮಾನತುಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಹಣ ವಸೂಲಿ ಆರೋಪ

ಇನ್ನೊಂದು ಪ್ರಕರಣದಲ್ಲಿ ಆಲ್ದೂರು ಠಾಣೆ ವ್ಯಾಪ್ತಿಯ ಹೋಂಸ್ಟೇ ಮಾಲೀಕರೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಕಾನ್‍ಸ್ಟೇಬಲ್‍ಗಳಾದ ಸ್ವಾಮಿ, ಶಶಿಕುಮಾರ್, ಅರುಣ್‍ಕುಮಾರ್ ಹಾಗೂ ಸಂಗಡ ಇದ್ದರೆನ್ನುವ ಕಾರಣಕ್ಕೆ ಚಾಲಕ ನವೀನ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಅನ್ಯರ ಹೆಸರಿನಲ್ಲಿ ಪರೀಕ್ಷೆ ಬರೆದ ಪ್ರಕರಣ

ಶೃಂಗೇರಿ ಪೊಲೀಸ್ ಠಾಣೆಯ ನಾಗಪ್ಪ ತುಕ್ಕಣನವರ ಎಂಬ ಕಾನ್‍ಸ್ಟೇಬಲ್ ಬೆಂಗಳೂರಿನಲ್ಲಿ ಈಚೆಗೆ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಬೇರೊಬ್ಬ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ.

ಕರ್ತವ್ಯಲೋಪ

ಕೈಮರ ತನಿಖಾ ಠಾಣೆ ಹಾಗೂ ಹಾಲೇನಹಳ್ಳಿ ತನಿಖಾ ಠಾಣೆಗಳಿಗೆ ನಿಯೋಜನೆಗೊಂಡಿದ್ದ ಗ್ರಾಮಾಂತರ ಠಾಣೆಯ ಕಾನ್‍ಸ್ಟೇಬಲ್ ರಾಜುನಾಯ್ಕ್ ಹಾಗೂ ಮಂಗಲ್‍ದಾಸ್ ಎಂಬಿಬ್ಬರು ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net