

ರೋಣ: ತಾಲೂಕಿನಲ್ಲಿ ಆ.15ರಂದು ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗಾಗಿ 10 ಶಿಶುಪಾಲನೆ ಕೇಂದ್ರಗಳು ಕಾರ್ಯಾರಂಭಗೊಳ್ಳಲಿವೆ ಎಂದು ತಾಪಂ ಇಒ ರವಿ ಎ.ಎನ್. ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಶಿಶುಪಾಲನೆ ಕೇಂದ್ರಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕೂಸಿನ ಮನೆ (ಶಿಶುಪಾಲನೆ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಪ್ರತಿಯೊಬ್ಬ ಪಿಡಿಒ ಮೇಲಿದೆ ಎಂದು ತಿಳಿಸಿದರು.
ಕೂಲಿ ಕಾರ್ಮಿಕರ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ತನ್ನ ಮಡಿಲಿಗೆ ಹಾಕಿಕೊಂಡಿದೆ. ತಾಲೂಕಿನ 10 ಗ್ರಾಪಂಗಳಿಂದ ಹೊಸಳ್ಳಿ, ಕುರಹಟ್ಟಿ, ಅಬ್ಬಿಗೇರಿ, ಯಾವಗಲ್, ಕೌಜಗೇರಿ, ಬೆಳವಣಕಿ, ಹೊಳೆಮಣ್ಣೂರು, ಹೊಳೆಆಲೂರು, ಸವಡಿ, ಜಕ್ಕಲಿ ಗ್ರಾಮಗಳಲ್ಲಿ ಆ.15ರಂದು ಶಿಶುಪಾಲನೆ ಕೇಂದ್ರಗಳು ಉದ್ಘಾಟನೆಯಾಗಲಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹಯೋಗದಲ್ಲಿ ಈ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ವಿವಿಧ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅವರು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾಲೂಕ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ಪಿಡಿಒ, ಇತರರಿದ್ದರು.