2 ಗ್ಯಾಂಗ್'ನ 10 ಸರಗಳ್ಳರ ಬಂಧನ, 50 ಲಕ್ಷ ರೂ.ಮೊತ್ತದ 1 ಕೆಜಿ ತೂಕದ 25 ಚಿನ್ನದ ಸರ ಜಪ್ತಿ

1887e637-817e-4286-a518-a8fab523e89a
Published on

ಮೈಸೂರು: ಮೈಸೂರು ಸೇರಿದಂತೆ ವಿವಿಧೆಡೆ ಸರಗಳ್ಳತನ ಮಾಡಿದ್ದ ಎರಡು ಕುಖ್ಯಾತ ಗ್ಯಾಂಗ್‌ನ 10 ಆರೋಪಿಗಳು ಸಿಸಿಬಿ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಇವರಿಂದ 50 ಲಕ್ಷ ರೂ. ಮೌಲ್ಯದ ಬರೋಬ್ಬರಿ ಒಂದು ಕೆಜಿ ತೂಕದ 25 ಚಿನ್ನದ ಸರಗಳು ಮತ್ತು ಇತರ ಚಿನ್ನಭರಣವನ್ನೂ ವಶಪಡಿಸಿಕೊಳ್ಳಲಾಗಿದೆ.


ನಗರದಲ್ಲಿ ಸರಗಳ್ಳತನ ಹೆಚ್ಚಾಗಿದ್ದವು. ಹೀಗಾಗಿ, ಆರೋಪಿಗಳ ಪತ್ತೆಗಾಗಿ ಸಿಸಿಬಿ ಘಟಕದ ಅಧಿಕಾರಿಗಳ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ವಿಶೇಷ ತಂಡವು ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ 2 ಕುಖ್ಯಾತ ಸರಗಳ್ಳರ ತಂಡ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ 10 ಜನ ಸರಗಳ್ಳರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ವರದಿಯಾಗಿರುವ 25 ಸರಗಳ್ಳತನ ಪ್ರಕರಣಗಳು, ಒಂದು ಮನೆಗಳ್ಳತನ ಮತ್ತು ಎರಡು ಬೈಕ್ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಚಿನ್ನಾಭರಣ ಸೇರಿದಂತೆ ಕಳವು ಪ್ರಕರಣಕ್ಕೆ ಸೇರಿದ 2 ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು


ಈ ಪತ್ತೆ ಕಾರ್ಯದಿಂದಾಗಿ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯ-2. ಕುವೆಂಪುನಗರ ಠಾಣೆಯ-4, ವಿ.ವಿ.ಪುರಂ ಠಾಣೆಯ-2, ನರಸಿಂಹರಾಜ ಠಾಣೆಯ-1, ಸರಸ್ವತಿಪುರಂ ಠಾಣೆಯ-4, ಅಶೋಕಪುರಂ ಠಾಣೆಯ-1, ಕೃಷ್ಣರಾಜ ಠಾಣೆಯ-1, ಆಲನಹಳ್ಳಿ ಠಾಣೆಯ-2, ವಿಜಯನಗರ ಠಾಣೆಯ-3, ಲಕ್ಷ್ಮೀಪುರಂ ಠಾಣೆಯ-1, ಹೆಬ್ಬಾಳ ಠಾಣೆಯ-2 ಪ್ರಕರಣ, ಮೈಸೂರು ಜಿಲ್ಲೆಯ ಕೌಲಂದೆ ಠಾಣೆಯ-1, ಚಾಮರಾಜನಗರ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯ-1 ಸರಗಳ್ಳತನ ಪ್ರಕರಣ ಪತ್ತೆಯಾಗಿದೆ. ಜತೆಗೆ, ಕೌಲಂದೆ ಪೊಲೀಸ್ ಠಾಣೆಯ-1, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣವೂ ಪತ್ತೆಯಾಗಿದೆ ಎಂದು ತಿಳಿಸಿದರು.


ಇದಲ್ಲದೆ ಚಿನ್ನಾಭರಣ ಮಾರಾಟ ಮಾಡಲು ಬಂದಿದ್ದ ಒಬ್ಬ ಹಳೆಯ ಆರೋಪಿಯನ್ನೂ ದಸ್ತಗಿರಿ ಮಾಡಿ ಆತನಿಂದ ಮನೆ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದ 70 ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಹಿಂದೆ 1ನೇ ಗ್ಯಾಂಗ್‌ನ ಚಾಮರಾಜನಗರದ ಮಂಜ 27 ಮತ್ತು ಕೊಪ್ಪಲಿನ ಚಂದ್ರು 4 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಇಬ್ಬರು ಆರೋಪಿಗಳು ವೃತ್ತಿನಿರತ ಸರಗಳ್ಳರು. ಜೈಲುವಾಸ ಅನುಭವಿಸಿ ಬಂದ ನಂತರವೂ ಸಹ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದರು.


2ನೇ ಗ್ಯಾಂಗ್‌ನ ಗೋವಿಂದ, ಸುರೇಶ್, ಮನು ಸೇರಿದಂತೆ 6 ಆರೋಪಿಗಳು ಮೂಲತಃ ಚಾಮರಾಜನಗರ ಜಿಲ್ಲೆಯವರು. ಪರಸ್ಪರ ರಕ್ತ ಸಂಬಂಧಿಗಳು. ಇವರು ಹಲವಾರು ವರ್ಷಗಳಿಂದ ಮೈಸೂರು ನಗರದ ಹೆಬ್ಬಾಳ ಮತ್ತು ದೇವಯ್ಯನಹುಂಡಿಯಲ್ಲಿ ವಾಸವಾಗಿದ್ದು, ಗಾರೆಕೆಲಸ ಮತ್ತು ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಮೈಸೂರು ನಗರ ವ್ಯಾಪ್ತಿಯಲ್ಲಿ ಅವಕಾಶ ನೋಡಿಕೊಂಡು ಸರಗಳ್ಳತ ಮಾಡಿದ್ದಾರೆ ಎಂದು ಹೇಳಿದರು


ಎಚ್‌ಬಿ ವಿಭಾಗದ ಇನ್ಸ್‌ಪೆಕ್ಟರ್ ಜಿ.ಶೇಖರ್, ಎಎಸ್‌ಐಗಳಾದ ಅಸ್ಗರ್‌ಖಾನ್, ಎಂ.ಆರ್.ಗಣೇಶ್ ಸಿಬ್ಬಂದಿಯಾದ ಯು.ಉಮೇಶ್, ಸಲೀಂಖಾನ್, ರಾಮಸ್ವಾಮಿ, ಯಾಕೂಬ್ ಷರೀಪ್, ಸಿ.ಚಿಕ್ಕಣ್ಣ, ಎ.ಉಮಾಮಹೇಶ್, ಪಿ.ಎನ್.ಲಕ್ಷ್ಮೀಕಾಂತ, ಆನಂದ, ಪ್ರಕಾಶ್, ಸಿ.ಎನ್.ಶಿವರಾಜು, ಚಂದ್ರಶೇಖರ್, ಗೋವಿಂದ, ಸಿ.ಎಲ್.ಮಧುಸೂಧನ, ಮೋಹನಾರಾಧ್ಯ, ಕೆ.ಮಹೇಶ್, ನರಸಿಂಹರಾಜು, ನಬೀಪಟೇಲ್, ಪವನ್, ಜಿ.ಆರ್.ಮಮತಾ, ಎಂ.ಎಂ.ರಮ್ಯ, ಗೌತಮ್, ಶಿವಕುಮಾರ್ ಪತ್ತೆ ಕಾರ್ಯದಲ್ಲಿದ್ದರು ಎಂದರು.

ಗೂಂಡಾ ಕಾಯ್ದೆ:
ಮೇಲಿಂದ ಮೇಲೆ ಅಪರಾಧ ಚಟುವಟಿಕೆ ನಡೆಸುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು. ಜತೆಗೆ, ಈ ಆರೋಪಿಗಳ ಚಲನವಲನ ಮೇಲೆ ನಿಗಾ ವಹಿಸಲಾಗುವುದು ಎಂದು ಡಾ.ಚಂದ್ರಗುಪ್ತ ತಿಳಿಸಿದರು.


ಸರಗಳ್ಳತನಕ್ಕೆ ವಕೀಲ ಸಾಥ್:
ತಿಂಗಳ ಹಿಂದೆ ಬಂಧಿಸಿದ್ದ ಆರು ಜನರ ಸರಗಳ್ಳರ ಪ್ರಕರಣದಲ್ಲಿ ವಕೀಲರೊಬ್ಬರು ಪಾಲುದಾರ. ಕಾನೂನು ಸಲಹೆ, ಜಾಮೀನು ಕೊಡಿಸುವುದು, ಚಿನ್ನಾಭರಣ ಮಾರಾಟಕ್ಕೂ ಈತ ಸಹಾಯ ಮಾಡುತ್ತಿದ್ದ. ವಕೀಲ ಸೇರಿದಂತೆ 6 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.


ಪಿಎಫ್‌ಐ ಕಚೇರಿಗೆ ಬೀಗ:
ಕೇಂದ್ರ ಸರ್ಕಾರವು ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಗರದ ಮಂಡಿಯಲ್ಲಿರುವ ಕಚೇರಿಗೆ ಬೀಗ ಹಾಕಲಾಗಿದೆ. ಈ ಸಂಘಟನೆಯ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಳಸಂತೆಯಲ್ಲಿ ದಸರಾ ಗೋಲ್ಡ್ ಕಾರ್ಡ್ ಮಾರಾಟ ಕುರಿತು ಗಮನಕ್ಕೆ ಬಂದಿದೆ. ಈ ಕುರಿತು ನಿಗಾ ವಹಿಸಲಾಗಿದೆ ಎಂದು ಪ್ರಶ್ನೆವೊಂದಕ್ಕೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net