

ಕಾರವಾರ:ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ನಗರದ ಟ್ಯಾಗೋರ್ ಹಾಗೂ ಅಲಿಗದ್ದಾ ಕಡಲ ತೀರದಲ್ಲಿ ಶನಿವಾರ ವಿವಿಧ ಸಂಘಟನೆಗಳಿಂದ ಕಡಲ ತೀರ ಸ್ವಚ್ಛತೆ ನಡೆಸಲಾಯಿತು.
ಎರಡು ಕಿಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 2 ತಾಸಿನಲ್ಲಿ 300 ಜನರ ಸೇರಿ ಸುಮಾರು 10.95 ಕ್ವಿಂಟಾಲ್ ಕಸ ಸಂಗ್ರಹಿಸಲಾಯಿತು. ಅದರಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ವಸ್ತುಗಳಿದ್ದವು.
ಅಲಿಗದ್ದಾ ತೀರದಲ್ಲಿ ಒಟ್ಟು 497 ಕೆಜಿ ಕಸ ಸಂಗ್ರಹಿಸಲಾಗಿದ್ದು, ಅದರಲ್ಲಿ 302 ಕೆಜಿ ಪ್ಲಾಸ್ಟಿಕ್ ವಸ್ತುಗಳು, 95 ಕೆಜಿ ಮೀನಿನ ಬಲೆ, 35 ಕೆಜಿ ಗ್ಲಾಸ್ ಬಾಟಲ್‌ಗಳು, 30 ಕೆಜಿ ಪಾದರಕ್ಷೆಗಳಿದ್ದವು. ಟ್ಯಾಗೋರ್ ಕಡಲ ತೀರದಲ್ಲಿ 598 ಕೆಜಿ ಕಸ ಸಂಗ್ರಹಿಸಿದ್ದು, ಅದರಲ್ಲಿ 106 ಕೆಜಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, 49 ಕೆಜಿ ಇತರೆ ಪ್ಲಾಸ್ಟಿಕ್ ವಸ್ತು, 21 ಕೆಜಿ ಕಾಜಿನ ಬಾಟಲಿಗಳು, 43 ಕೆಜಿ ಬೇರೆ ರೀತಿಯ ಪ್ಲಾಸ್ಟಿಕ್, 39 ಕೆಜಿ ಮೀನಿನ ಬಲೆಗಳು, 31 ಕೆಜಿ ಬಟ್ಟೆಯ ವಸ್ತುಗಳು, 19 ಕೆಜಿ ಶಾಂಪೂ, ಸಾಬೂನು ಕವರ್‌ಗಳು, 13 ಕೆಜಿ ಕಾಸ್ಮೆಟಿಕ್ ಕವರ್‌ಗಳು 13 ಕೆಜಿ ಔಷಧ ಗುಳಿಗೆಯ ಕವರ್‌ಗಳು, 39 ಕೆಜಿ ಚಪ್ಪಲಿಗಳು, 72 ಕೆಜಿ ಪ್ಯಾಕೇಜಿಂಗ್ ವಸ್ತುಗಳನ್ನು ಸಂಗ್ರಹಿಸಲಾಯಿತು ಎಂದು ವಿಂಗಡಿಸಗಿದೆ.
ಡಿಎಫ್‌ಒ ಡಾ.ಪ್ರಶಾಂತಕುಮಾರ ಕೆ.ಸಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರವಾರ ಕೋಸ್ಟ್ಗಾರ್ಡ್ ಕಮಾಂಡಿಂಗ್ ಅಧಿಕಾರಿ ಸುರೇಶ ಕುರುಪ್, ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜೆ.ಎಲ್.ರಾಠೋಡ ಇದ್ದರು.
ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಅರಣ್ಯ ಇಲಾಖೆಯ ಮರೀನ್ ಮತ್ತು ಕೋಸ್ಟಲ್ ವಿಂಗ್, ಸೇಂಟ್ ಜೋಸೆಫ್, ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್ ಹಾಗೂ ಕರಾವಳಿ ಕಾವಲುಪಡೆಯ ಸಿಬ್ಬಂದಿ ಪಾಲ್ಗೊಂಡಿದ್ದರು.