

ಮೈಸೂರು: ಕಳೆದ ಒಂದು ತಿಂಗಳಿನ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ಕಳ್ಳತನ ಮತ್ತು ಕಾಣೆಯಾಗಿದ್ದ 30 ಲಕ್ಷ ರೂ.ಬೆಳೆ ಬಾಳುವ ವಿವಿಧ ಮಾದರಿಯ 135 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರವು ಮೊಬೈಲ್ ಟ್ರ್ಯಾಕಿಂಗ್ ಸಿಸ್ಟಮ್ ಆಗಿರುವ ‘ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಆನ್‌ಲೈನ್ ವೇದಿಕೆ ಮತ್ತು 6363255135 ಮೊಬೈಲ್ ಮೂಲಕ ನೋಂದಣಿಯಾದ ಕಳೆದುಕೊಂಡ, ಕಾಣೆಯಾದ, ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ವಾರಸುದಾರರಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿಂದಿರುಗಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ನಗರ ವ್ಯಾಪ್ತಿಯಲ್ಲಿ 2022ರ ಸೆಪ್ಟಂಬರ್‌ನಿಂದ 3,075 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಈ ವರೆಗೆ ಮೈಸೂರು ನಗರ ಸೈಬರ್, ಆರ್ಥಿಕ, ಮಾದಕ ದ್ರವ್ಯ ಕ್ರೈಮ್ ಪೊಲೀಸ್ ಠಾಣೆಯಿಂದ(ಸೆನ್) 270 ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳ್ಳತನ ಮಾಡಿದ್ದ ಮೊಬೈಲ್‌ಗಳನ್ನು ಆರೋಪಿಗಳು ಸ್ವಂತಕ್ಕೆ ಬಳಕೆ ಮಾಡಿಕೊಂಡಿಲ್ಲ. ಹಾಗೆ ಮಾಡಿದರೆ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚು. ಈ ಭಯದಿಂದ ಆರೋಪಿಗಳು ಕಡಿಮೆ ಹಣಕ್ಕೆ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಮಾರಾಟ ಮಾಡಿದ್ದಾರೆ. ಇದನ್ನು ಖರೀದಿಸಿದವರಿಗೆ ಅದು ಕದ್ದ ಮೊಬೈಲ್ ಎಂದು ತಿಳಿದಿರುವುದಿಲ್ಲ. ಇವರಲ್ಲಿ ಬಹುತೇಕರು ಮುಗ್ಧರು ಎಂದು ತಿಳಿಸಿದರು.
ಸಿಇಐಆರ್ ನೋಂದಾಯಿತ ಆಗಿರುವ ಕಳ್ಳತನ ಮಾಡಿದ ಮೊಬೈಲ್ ಅನ್ನು ಆನ್ ಆಗುತ್ತಿದ್ದಂತೆ ನಗರ ಸೆನ್ ಠಾಣೆಗೆ ಎಚ್ಚರಿಕೆ ಸಂದೇಶ ಬರುತ್ತದೆ. ಅವರು ಇಂತಹ ಮೊಬೈಲ್ ಅನ್ನು ಒಂದು ತಿಂಗಳು, 2 ವರ್ಷ ಬಿಟ್ಟು ಆನ್ ಮಾಡಿದ್ದರೂ ಈ ಸಂದೇಶ ಬರುತ್ತದೆ. ಅಂತಹ ಮೊಬೈಲ್ ಫೋನ್‌ಗೆ ಪೊಲೀಸರು ಕರೆ ಮಾಡಿ ಬಳಕೆದಾರರಿಗೆ ವಿಷಯ ತಿಳಿಸಿ ಮನದಟ್ಟು ಮಾಡಿಕೊಡುತ್ತಾರೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಬಳಕೆದಾರರು, ಪೊಲೀಸರಿಗೆ ಅಂತಹ ಮೊಬೈಲ್‌ಗಳನ್ನು ವಾಪಸ್ ಮಾಡಿದ್ದಾರೆ. ಜತೆಗೆ, ಅಂಚೆ ಮೂಲಕ ಅನ್ಯರಾಜ್ಯದವರು ಕಳುಹಿಸಿಕೊಟ್ಟಿರುವ ಬಹಳಷ್ಟು ಉದಾಹರಣೆಗಳಿವೆ ಎಂದರು.
ಕಳ್ಳತನ, ಕಾಣೆಯಾದ ಮೊಬೈಲ್ ಫೋನ್‌ಗಳ ಪೈಕಿ ಅಸ್ಸಾಂನಿಂದ 30, ಉತ್ತರಪ್ರದೇಶ, ಪಶ್ಚಿಮಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಿಂದಲೂ ಪತ್ತೆ ಮಾಡಲಾಗಿದೆ ಎಂದರು.
ಮೈಸೂರು ನಗರದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣದ ಕುರಿತು ವಿಶೇಷ ತಂಡವನ್ನು ರಚಿಸಲಾಗಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಸೆನ್ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ಈ ಪ್ರಕರಣಗಳ ಮಾಹಿತಿ ಪಡೆದುಕೊಂಡು ಸಿಇಐಆರ್ ತಂತ್ರಾಂಶದ ಸಹಾಯದಿಂದ ಇವುಗಳನ್ನು ಪತ್ತೆ ಮಾಡಿದ್ದಾರೆ. ಪತ್ತೆ ಕಾರ್ಯದಲ್ಲಿ ಸೆನ್ ಠಾಣೆಯ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್, ಪಿಎಸ್‌ಐಗಳಾದ ಎನ್.ಅನಿಲ್‌ಕುಮಾರ್, ಎಂ.ಎಲ್.ಸಿದ್ದೇಶ್, ಎಎಸ್‌ಐಗಳಾದ ಸುಭಾಷ್‌ಚಂದ್ರ, ಷರೀಪ್, ರವಿಕುಮಾರ್, ಸಿಬ್ಬಂದಿ ಬಾಷಾ, ವೀಣಾ ಇದ್ದರು ಎಂದು ಮಾಹಿತಿ ನೀಡಿದರು. ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಗೋಷ್ಠಿಯಲ್ಲಿದ್ದರು
ಮೊಬೈಲ್ ಕಳ್ಳತನವಾದರೆ ಏನು ಮಾಡಬೇಕು?
ಮೊಬೈಲ್ ಕಳ್ಳತನ, ಕಾಣೆಯಾದರೆ ಸಾರ್ವಜನಿಕರು ಕೇಂದ್ರ ಸರ್ಕಾರವು ಮೊಬೈಲ್ ಟ್ರ್ಯಾಕಿಂಗ್ ಸಿಸ್ಟಮ್ ವ್ಯವಸ್ಥೆಯಾದ https://www.ceir.gov.in ಮತ್ತು ನಗರ ಪೊಲೀಸ್ ಘಟಕದಿಂದ ರೂಪಿಸಿರುವ 63632 55135 ವ್ಯಾಟ್ಸ್‌ಆ್ಯಪ್ ನಂಬರ್‌ಗೆ ಏಐ ಎಂದು ಸಂದೇಶ ಕಳುಹಿಸಬೇಕು. ಬಳಿಕ ಬರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ದೂರು ದಾಖಲಿಸಬೇಕು. ಈ ದೂರನ್ನು ನಗರದ ಸೆನ್ ಅಪರಾಧ ಪೊಲೀಸ್ ಠಾಣೆಯಿಂದ ಪರಿಶೀಲನೆ ಮಾಡಿ ಪತ್ತೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸಾರ್ವಜನಿಕರಿಗೆ ತಿಳಿಸಿದರು.