

ಹಾಸನ: ಶೃಂಗೇರಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಎದುರುಗಡೆಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರ ಪೈಕಿ ಒಬ್ಬರು ಮೃತಪಟ್ಟು ಉಳಿದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿ ಗೇಟ್ ಹತ್ತಿರ ಮಂಗಳವಾರ ಮುಂಜಾನೆ 2 ಗಂಟೆ ಸಮಯದಲ್ಲಿ ನಡೆದಿದೆ.
ಬೆಂಗಳೂರು ಉತ್ತರ ಓಲ್ಡ್ ಬೈಯಿಲಾ ನಿವಾಸಿ ನಂದಕುಮಾರ್ (37) ಮೃತ ದುರ್ದೈವಿ. 3 ವರ್ಷದ ಮಗು ಪ್ರಸೀದ್‌ಗೌಡ, ಹರಿಕೃಷ್ಣ, ಲಕ್ಷ್ಮೀಗೌಡ, ರಶ್ಮಿ, ಅನ್ನಪೂರ್ಣಾ, ಪ್ರೀತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನ ಎನ್‌ಆರ್‌ಐ ಲೇಔಟ್ ನಿವಾಸಿ ಹರಿಕೃಷ್ಣ ಅವರು ಕುಟುಂಬ ಸದಸ್ಯರೊಂದಿಗೆ ದೇವರ ದರ್ಶನಕ್ಕೆ ಶೃಂಗೇರಿಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾವಾಗ ಎನ್.ಎಚ್ 75 ಚನ್ನರಾಯ ಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿ ಗೇಟ್ ಹತ್ತಿರ ಮಂಗಳವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಎದುರಿನಿಂದ ಬಂದ ಗೂಡ್ಸ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಮಾಡಿದ ರಭಸಕ್ಕೆ ಎಲ್ಲರೂ ಕಾರಿನಿಂದ ರಸ್ತೆಯ ಮೇಲೆ ಬಿದ್ದಿದ್ದರಿಂದ. ಕಾರಿನ ಮುಂಭಾಗ ಕುಳಿತಿದ್ದ ನಂದನ್ ಕುಮಾರ್ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ.
ಗಾಯಾಳುಗಳನ್ನು ಸ್ಥಳೀಯರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂದಕುಮಾರ್ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಉಳಿದ ಗಾಯಾಳುಗಳನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲ ಗಾಯಾಳುಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಅಪಘಾತ ಮಾಡಿದ ಗೂಡ್ಸ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹರಿಕೃಷ್ಣ ಅವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.