1 ಲಕ್ಷ ಲೀ.ಇಥೆನಾಲ್ ಉತ್ಪಾದನೆ ಗುರಿ

28ckd4-Web
ಚಿಕ್ಕೋಡಿ ಸಿ.ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 52ನೆಯ ಸರ್ವ ಸಾಧಾರಣ ಸಭೆ ಉದ್ದೇಶಿಸಿ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ಕವಟಗಿಮಠ, ಅಮಿತ್ ಕೋರೆ, ಸಂದೀಪ ಪಾಟೀಲ, ಭರತ ಬನವಣೆ ಇತರರು ಇದ್ದರು.
Published on

ಚಿಕ್ಕೋಡಿ: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವುದರ ಜತೆಗೆ ಪ್ರಸಕ್ತ ವರ್ಷ ಒಂದು ಲಕ್ಷ ಲೀ.ಇಥೆನಾಲ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ರೈತರು ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದು ಕಾರ್ಖಾನೆ ರೂವಾರಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 52ನೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಸರ್ವ ಸಾಧಾರಣ ಸಭೆ ನಡೆದಿದೆ. ಕರೊನಾ ರೋಗ ಇನ್ನೂ ಹೋಗಿಲ್ಲ. ಹಾಗಾಗಿ ರೈತರು ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದರು.

ಕರೊನಾ ಹೊಡೆತದಿಂದ ಸಕ್ಕರೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಆದರೂ ರೈತರಿಗೆ ಕಾರ್ಖಾನೆ ವತಿಯಿಂದ ಅನೇಕ ಸೌಲಭ್ಯ ಒದಗಿಸಲಾಗಿದೆ. ಇಥೆನಾಲ್ ಘಟಕ ಪ್ರಾರಂಭಿಸಲು 120 ಕೋಟಿ ರೂ. ಬಂಡವಾಳ ಹೂಡಬೇಕಾದ ಅಗತ್ಯವಿದೆ. ರೈತರು ತಮ್ಮ ಪಾಲಿನ ಷೇರು ಹಂತ ಹಂತವಾಗಿ ಪಾವತಿ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸುಮಾರು 15 ಲಕ್ಷ ಟನ್ ಕಬ್ಬು ನುರಿಸುವ ಗುರಿ ಇದೆ. ಕಾರ್ಖಾನೆ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಇಥೆನಾಲ್ ಹೆಚ್ಚು ಉತ್ಪಾದನೆ ಮಾಡಲು ಅವಕಾಶ ನೀಡಿದೆ. ಇದರಿಂದ ಕಬ್ಬಿಗೆ ಹೆಚ್ಚಿನ ದರ ಕೊಡಲು ಅನುಕೂಲವಾಗುತ್ತದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಾರ್ಖಾನೆ ಉಳಿಯಲು ರೈತರು ಹೆಚ್ಚಿಗೆ ಕಬ್ಬು ಕಳಿಸಬೇಕು. ರೈತರು ಬೆಳೆಯುವ ಬೆಳೆಗೆ ಇಳುವರಿ ಹೆಚ್ಚಾಗಲು ಪ್ರಯತ್ನ ಮಾಡಬೇಕು ಎಂದರು. ಉಪಾಧ್ಯಕ್ಷ ಸಂದೀಪ ಪಾಟೀಲ. ನಿರ್ದೇಶಕರಾದ ಅಜಿತ ದೇಸಾಯಿ, ಭರತ ಬನವಣೆ, ಮಲ್ಲಿಕಾರ್ಜುನ ಕೋರೆ, ಮಹಾವೀರ ಮಿರ್ಜೆ, ಬಾಳಗೌಡ ರೇಂದಾಳೆ, ನಂದಕುಮಾರ ನಾಶಿಪುಡಿ, ತಾತ್ಯಾಸಾಹೇಬ ಕಾಟೆ, ಮಲ್ಲಪ್ಪ ಮೈಶಾಳೆ, ಎಂಡಿ ಆರ್.ಟಿ.ದೇಸಾಯಿ ಇದ್ದರು. ಕಾರ್ಮಿಕ ಕಲ್ಯಾಣಾಧಿಕಾರಿ ಶಿವಾನಂದ ಹಕಾರೆ ನಿರೂಪಿಸಿದರು.

ಕಳೆದ ವಷರ್ಕ್ಕಿಂತ ಈ ವರ್ಷ ಕಬ್ಬಿನ ಪ್ರಮಾಣ ಹೆಚ್ಚಿದೆ. ಮುಂಬರುವ ತಿಂಗಳಲ್ಲಿ ಶೇ.70 ಕಬ್ಬು ಕಾರ್ಖಾನೆಗೆ ಬರುತ್ತದೆ. ದೇಶದಲ್ಲಿ 35 ಬಿಲಿಯನ್ ಟನ್ ಸಕ್ಕರೆ ಉತ್ಪಾದನೆ ಆಗಲಿದೆ. ಕಾರ್ಖಾನೆಯಲ್ಲಿ ಇಥೆನಾಲ್ ಉತ್ಪಾದನೆ ಹೆಚ್ಚಿಸಲಾಗುವುದು.|ಅಮಿತ್ ಕೋರೆ ಸಿ.ಬಿ. ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net