ಒಂದುವರೆ ಎಕರೆಯಲ್ಲಿ ಲಕ್ಷ ಆದಾಯ

ಒಂದುವರೆ ಎಕರೆಯಲ್ಲಿ ಲಕ್ಷ ಆದಾಯ
Published on

ಅಂತೋಣಿ ಪಿ.ವಿ. ಸಿದ್ದಾಪುರ
ಕೃಷಿ ನಂಬಿ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ, ನೌಕರಿಗಿಂತಲೂ ಹೆಚ್ಚು ಆದಾಯ ಗಳಿಸಲು ಸಾಧ್ಯವಿದೆ ಎಂಬುದಕ್ಕೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಗದ್ದೆಮನೆ ಕುಞಂಣ್ಣ, ವಾರಿಜಾ ದಂಪತಿ ಸಾಕ್ಷಿಯಾಗಿದ್ದಾರೆ.

ಪಿತ್ರಾರ್ಜಿತ ಒಂದೂವರೆ ಎಕರೆ ಜಮೀನಿನಲ್ಲಿ ಮಿಶ್ರ ಕೃಷಿ ಮಾಡುವ ಮೂಲಕ ವಾರ್ಷಿಕ ಲಕ್ಷ ರೂಪಾಯಿಗೂ ಅಧಿಕ ಆದಾಯಗಳಿಸುತ್ತಿದ್ದಾರೆ.
ತೋಟದಲ್ಲಿ ಅರೆಬಿಕಾ, ರೊಬಸ್ಟಾ ಕಾಫಿ ಬೆಳೆಯುವ ಮೂಲಕ 2 ಲಕ್ಷ ಆದಾಯಗಳಿಸುತ್ತಿದ್ದಾರೆ. ತೋಟದಲ್ಲಿ ನೆರಳಿಗೆ ಬೆಳೆಸಿರುವ ಮರಗಳಿಗೆ ಕಾಳು ಮೆಣಸು ಹಾಕುವ ಮೂಲಕ ಅದರಲ್ಲೂ ಅಧಿಕ ಲಾಭಗಳಿಸುತ್ತಿದ್ದಾರೆ.

ಜತೆಗೆ ಅಡಕೆ, ತೆಂಗು, ಬಾಳೆ ಬೆಳೆಯಲಾಗುತ್ತಿದೆ. ಜೇನು ಸಾಕಣೆಯಲ್ಲೂ ಕೂಡ ತೊಡಗಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದ ವಿವಿಧ ಮಜಲುಗಳನ್ನು ಅರಿತಿದ್ದಾರೆ.

ಹಸು ಸಾಕಣೆ: ಗದ್ದೆ ಮನೆ ಕುಞಂಣ್ಣ ಕೃಷಿಯ ಜತೆಗೆ ಹಸು ಸಾಕಣೆಯನ್ನು ಕೂಡ ಮಾಡುತ್ತಿದ್ದು, ಜಮೀನಿನಲ್ಲಿ ಸುಸಜ್ಜಿತ ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ. ಕ್ರಾಸ್ ಬ್ರೀಡ್ ತಳಿಯ ಮೂರು ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ 8ರಿಂದ 10ಲೀಟರ್ ಹಾಲು ಉತ್ಪತ್ತಿ ಯಾಗುತ್ತಿದ್ದು, ಲೀಟರ್‌ಗೆ 35 ರೂ. ನಂತೆ ಸ್ಥಳೀಯವಾಗಿ ಮಾರಾಟಲಾಗುತ್ತಿದೆ. ಹಸುಗಳಿಗೆ ಇರುವ ಹುಲ್ಲು ಜಮೀನಿನಲ್ಲಿ ದೊರೆಯುತ್ತಿದ್ದು, ಹೋಟೆಲ್, ಅಂಗಡಿಗಳಿಂದ ತರಕಾರಿ ಸಿಪ್ಪೆ ಇತ್ಯಾದಿಗಳನ್ನು ತಂದು ನೀಡಲಾಗುತ್ತಿದೆ. ಜತೆಗೆ ತೋಟದ ಸಮೀಪದಲ್ಲಿ ಹಂದಿ ಸಾಕಣೆಯನ್ನೂ ಕೂಡ ಮಾಡುತ್ತಿದ್ದು, ಇದರಿಂದಲೂ ಲಾಭದೊರಕುತ್ತಿದೆ.

ಗೊಬ್ಬರದಿಂದಲೂ ಆದಾಯ: ಹಸುಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಶೇಖರಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಟ್ರಾೃಕ್ಟರ್ ಸಗಣಿ ಗೊಬ್ಬರಕ್ಕೆ ರೂ. 4 ಸಾವಿರ ದಿಂದ 5 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ 40ರಿಂದ 50 ಸಾವಿರ ಆದಾಯ ಬರುತ್ತಿದೆ.

ಪಶು ವೈದ್ಯರ ಕೊರತೆ: ಮಾಲ್ದಾರೆ ಭಾಗದಲ್ಲಿ ಪಶು ಆಸ್ಪತ್ರೆ ಇದ್ದರೂ, ವೈದ್ಯರಿಲ್ಲದಿರುವುದು ಸಮಸ್ಯೆಯಾಗಿದೆ. ಈ ಭಾಗದಲ್ಲಿ ರೈತರು ಹೆಚ್ಚಾಗಿ ದನ ಕರುಗಳನ್ನು ಸಾಕುವುದರಿಂದ ಅನಾರೋಗ್ಯ ಸಂಭವಿಸಿದರೆ 25 ಕಿಲೋ ಮೀಟರ್ ದೂರದ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ದನ ಕರುಗಳನ್ನು ಕಳೆದುಕೊಳ್ಳುವ ಸನ್ನಿವೇಶವೂ ಏರ್ಪಡುತ್ತದೆ. ಸಂಬಂಧ ಪಟ್ಟವರು ಗಮನಹರಿಸಿ ಪಶುವೈದ್ಯರ ನೇಮಕ ಮಾಡಬೇಕು ಎಂಬೂದು ಕುಞಂಣ್ಣ ಅವರ ಒತ್ತಾಯ.

ಹಣ್ಣು, ತರಕಾರಿ ಉತ್ಪಾದನೆ: ಅಗತ್ಯಕ್ಕೆ ಬೇಕಾಗುವಷ್ಟು ತರಕಾರಿಗಳನ್ನು ಮನೆ ಸುತ್ತಲ ಜಾಗದಲ್ಲೇ ಉತ್ಪಾದಿಸಿಕೊಳ್ಳಲಾಗುತ್ತಿದೆ. ಗೃಹ ಬಳಕೆಗೆ ಬೇಕಾಗುವ ಬೀನ್ಸ್, ಬೆಂಡೆ, ಟೊಮ್ಯಾಟೊ, ಶುಂಠಿ, ಸೌತೆಕಾಯಿ, ಬದನೆ, ಮೆಣಸು, ಅರಿಶಿಣ, ಬೂದು ಕುಂಬಳ ಹಾಗೂ ಸೊಪ್ಪುಗಳನ್ನು ಮನೆ ಅಂಗಳದಲ್ಲೇ ಬೆಳೆಯಲಾಗುತ್ತಿದೆ. ಮನೆಯ ಸುತ್ತ ಪಪ್ಪಾಯ, ಚಕ್ಕೋತಾ, ಕಿತ್ತಳೆ, ನೇರಳೆ, ನೆಲ್ಲಿಕಾಯಿ, ವಿವಿಧ ತಳಿಯ ಮಾವು ಹಾಗೂ ಬಟರ್ ಫ್ರೂಟ್‌ಗಳನ್ನು ಬೆಳೆಯಲಾಗಿದೆ.

ಭೂಮಿ ಗುತ್ತಿಗೆ ಪಡೆದು ಬೇಸಾಯ: ಕೊಡಗಿನ ಗಡಿ ಪ್ರದೇಶ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆದು ಶುಂಠಿ, ಜೋಳ, ಬಾಳೆ, ಹಸಿ ಮೆಣಸು ಬೆಳೆಯಲಾಗುತ್ತಿದೆ. ಇದರಿಂದಲೂ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಶುಂಠಿಗೆ ಹೆಚ್ಚಿನ ಬೆಲೆ ಇರುವುದರಿಂದ ಈ ಬಾರಿ ಕೊಡಗಿನಲ್ಲೂ ಕೂಡ ಭೂಮಿ ಪಡೆದು ಸಾವಯವ ಮಾದರಿಯಲ್ಲಿ ಶುಂಠಿ ಬೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net