

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 28 ದಿನದ ಅವಧಿಯಲ್ಲಿ 1.94 ಕೋಟಿ ರೂ. ಸಂಗ್ರಹವಾಗಿದೆ.
ಗುರುವಾರ ಬೆಳಗ್ಗೆ 6.30ರಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯ ಸಂಜೆ 6.50 ವರೆಗೂ ನಡೆಯಿತು.
ಈ ಬಾರಿ ಅವರಾತ್ರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜೆ ದಿನಗಳಂದು ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇವರಲ್ಲಿ ಹರಕೆ ಹೊತ್ತ ಭಕ್ತರು ದೇಗುಲ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಜತೆಗೆ ಇ-ಹುಂಡಿ ಮೂಲಕವೂ ಹಣವನ್ನು ಸಂದಾಯ ಮಾಡಿದ್ದರು. ಹುಂಡಿ ಎಣಿಕೆಯಲ್ಲಿ ಇ-ಹುಂಡಿ ಹಣ 3,30,907 ರೂ. ಸೇರಿದಂತೆ 1,94,49,243 ರೂ.ನಗದು, 63.06 ಗ್ರಾಂ ಚಿನ್ನ ಹಾಗೂ 1 ಕೆ.ಜಿ 510 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ಜ.23ರಂದು ನಡೆದ ಹುಂಡಿ ಎಣಿಕೆಯಲ್ಲಿ 30 ದಿನದ ಅವಧಿಗೆ ಇ-ಹುಂಡಿ ಹಣ 4,21,505 ರೂ.ಸೇರಿದಂತೆ 2,29,67,216 ರೂ. ನಗದು, ಚಿನ್ನ 18 ಗ್ರಾಂ ಹಾಗೂ ಬೆಳ್ಳಿ 1 ಕೆ.ಜಿ.200 ಗ್ರಾಂ ಸಂಗ್ರಹವಾಗಿತ್ತು.
ಚಲಾವಣೆಯಲ್ಲಿ ಇಲ್ಲದ 2 ಸಾವಿರ ಮುಖಬೆಲೆಯ 6 ನೋಟುಗಳು, 11 ವಿದೇಶಿ ನೋಟುಗಳು ಹುಂಡಿಯಲ್ಲಿದ್ದವು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ನಾಮ ನಿರ್ದೇಶಿತ ಸದಸ್ಯರಾದ ಗಂಗನ ತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ, ಮರಿಸ್ವಾಮಿ, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಧಿಕಾರಿ ಕಚೇರಿಯ ಮಧುಕರ್, ಬ್ಯಾಂಕ್ ಆಫ್ ಬರೋಡ ಕೊಳ್ಳೇಗಾಲ ಶಾಖೆಯ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.