ರಾಜ್ಯ ಸರ್ಕಾರ 7ತಿಂಗಳಲ್ಲಿ 1.90 ಲಕ್ಷ ಕೋಟಿ ರೂ. ಸಾಲ

prahlad joshi
Published on

ಹುಬ್ಬಳ್ಳಿ: ರಾಜ್ಯ ಸರ್ಕಾರವು 7ತಿಂಗಳಲ್ಲಿ 1.90 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ದುರ್ದೈವದ ಸಂಗತಿ. ರಾಜ್ಯ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಹುಂಡಿ ಹಣದ ಮೇಲೆ ರಾಜ್ಯ ಸರ್ಕಾರ ಕಣ್ಣು ಹಾಗಿದೆ. ಒಂದು ವೇಳೆ ದೇವಾಲಯಗಳ ಆದಾಯದ ಮೇಲೆ ತೆರಿಗೆ ಹಾಕಿದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ದಾರ್ ವಲ್ಲಭಭಾಯ್ ಪಟೇಲರು ಮೊದಲು ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದರು. ಸತ್ಯ ಗೊತ್ತಾದಾಗ ಬ್ಯಾನ್ ಹಿಂಪಡೆದರು. ಗೋವಾ ಮತ್ತು ಹೈದರಾಬಾದ್ ಪ್ರಾಂತ್ಯಗಳ ವಿಮೋಚನೆಗೆ ಸೈನ್ಯ ಕಳಿಸಲು ನೆಹರು ಒಪ್ಪಿರಲಿಲ್ಲ. ಆದರೆ ಸರ್ದಾರ್ ಪಟೇಲರು ಸೈನ್ಯ ತೆಗೆದುಕೊಂಡು ಹೋಗಿ ವಿಮೋಚನೆ ಮಾಡಿದ್ದರು. ವಲ್ಲಭಭಾಯ್ ಪಟೇಲರು ಗುಜರಾತ್‌ನವರು ಎನ್ನುವ ಕಾರಣಕ್ಕೆ ದೊಡ್ಡ ಪ್ರತಿಮೆ ಮಾಡಲಾಗಿದೆ. ಆದರೆ ಲಾಡ್ ಪ್ರತಿಯೊಂದು ವಿಷಯದಲ್ಲೂ ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಭಿನ್ನಾಭಿಪ್ರಾಯವಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ನಮ್ಮ ನಡುವೆ ಯಾವುದೇ ಮುನಿಸು ಇಲ್ಲ. ಶೆಟ್ಟರ್ ಅವರು ಅನ್ಯ ಕೆಲಸದ ನಿಮಿತ್ತ ಧಾರವಾಡ ಲೋಕಸಭೆ ಕ್ಷೇತ್ರ ಚುನಾವಣೆ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಕಚೇರಿಯ ಉದ್ಘಾಟನೆ ಕುರಿತು ಮೂರು ದಿನ ಮುಂಚಿತವಾಗಿಯೇ ಹೇಳಲಾಗಿತ್ತು. ಆದರೆ ಅನ್ಯ ಕಾರ್ಯದ ಹಿನ್ನೆಲೆಯಲ್ಲಿ ಶೆಟ್ಟರ್ ಬೆಂಗಳೂರಿಗೆ ಹೋಗಿದ್ದಾರೆ. ಮುಂದಿನ ಕಾರ್ಯಕ್ರಮಗಳಲ್ಲಿ ಅವರು ಖಂಡಿತವಾಗಿಯೂ ಪಾಲ್ಗೊಳ್ಳುತ್ತಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೈಯಕ್ತಿವಾಗಿಯೂ ಚರ್ಚೆ ಮಾಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net