1-9 ನೇ ತರಗತಿ ಪರೀಕ್ಷೆ, ನಾಳೆ ಮಹತ್ವದ ತೀರ್ಮಾನ ಪ್ರಕಟ; ಸಚಿವ ಸುರೇಶಕುಮಾರ ಭರವಸೆ

Sureshkumar
Suresh kumar
Published on

ವಿಜಯಪುರ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದಿರುವ ಶಿಕ್ಷಣ ಸಚಿವ ಸುರೇಶಕುಮಾರ 1 ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಏ. 8 ರಂದು ಮಹತ್ವದ ತೀರ್ಮಾನ ಪ್ರಕಟಿಸುವುದಾಗಿ ಪ್ರತಿಕ್ರಿಯಿಸಿದರು.

1 ರಿಂದ 9 ನೇ ತರಗತಿ ಮಕ್ಕಳ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಲಾಗಿದೆ. ಪಾಲಕರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶಿಕ್ಷಣ ಕಾಯ್ದೆ ಇತಿಮಿತಿಯಲ್ಲಿ ಮುಂದೆ ಹೋಗುವ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಏ. 8 ರಂದು ತೀರ್ಮಾನ ಪ್ರಕಟಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಪರೀಕ್ಷೆ ಪ್ರತಿಷ್ಟೆ ಪ್ರಶ್ನೆಯಲ್ಲ:

ಪರೀಕ್ಷೆ ನಡೆಸುವುದು ಸರ್ಕಾರದ ಪ್ರತಿಷ್ಟೆಯಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಅನಿವಾರ್ಯ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 74 ದಿನ ಹಾಗೂ ಪಿಯುಸಿ ಪರೀಕ್ಷೆಗೆ 46 ದಿನ ಬಾಕಿ ಇದೆ. ತನ್ನಿಮಿತ್ತ ಶೈಕ್ಷಣಿಕ ಜಿಲ್ಲೆಗಳ ಸಭೆ ನಡೆಸಲಾಗುತ್ತಿದೆ. ಬೆಳಗಾವಿ, ಧಾರವಾಡ, ಗದಗ ಮತ್ತಿತರ ಜಿಲ್ಲೆಗಳ ಸಭೆ ನಡೆಸಲಾಗಿದ್ದು, ಇದೀಗ ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ತಾಲೂಕು ಶಿಕ್ಷಣಾಧಿಕಾರಿಗಳು, ಪಪೂ ಇಲಾಖೆ ಉಪ ನಿರ್ದೇಶಕರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಸಿದ್ದತೆ ಬಗ್ಗೆ ಪರಿಶೀಲನೆ ಸಭೆ ನಡೆಸಲಾಗಿದೆ. ಒಟ್ಟು ಶೈಕ್ಷಣಿಕ ಪ್ರಗತಿ ಹೇಗಿದೆ, ಎಷ್ಟು ಪಠ್ಯಕ್ರಮ ಬೋಧಿಸಲಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಿದೆ ಎಂದರು.

ವೇಳಾಪಟ್ಟಿ ಪ್ರಕಟ:

ಮೇ 24 ರಿಂದ ಪಿಯುಸಿ ಹಾಗೂ ಜೂ.21 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಿಂದ 1,14,302 ಅಭ್ಯರ್ಥಿಗಳು ಮತ್ತು ಪಿಯುಸಿಗೆ 79619 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. 363 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.

ಸುರಕ್ಷಾ ಕ್ರಮ:

ಪರೀಕ್ಷಾ ಕೇಂದ್ರಗಳನ್ನು ಸುರಕ್ಷಾ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಸಾಕಷ್ಟು ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾರ್ಥಿಗಳಲ್ಲಿ ಭಯ ಹೋಗಲಾಡಿಸಲಾಗುತ್ತಿದೆ. ಅದಕ್ಕಾಗಿ ವಿವಿಧ ಇಲಾಖೆಗಳ ನೆರವು ಪಡೆಯಲಾಗುತ್ತಿದೆ. ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳು ಪರೀಕ್ಷಾ ಸುರಕ್ಷತೆಗಾಗಿ ಮುಂದೆ ಬಂದಿವೆ ಎಂದು ಸುರೇಶಕುಮಾರ ತಿಳಿಸಿದರು.

ಪಠ್ಯ ಪ್ರಮಾಣ ಕಡಿಮೆ:

ಕರೊನಾ ಹಿನ್ನೆಲೆ ಸಾಕಷ್ಟು ಅಸ್ತವ್ಯಸ್ತವಾಗಿದೆ. ಜೂನ್ ತಿಂಗಳಲ್ಲಿ ತರಗತಿ ಆರಂಭವಾಗಬೇಕಿತ್ತು. ಆದರೆ ಕರೊನಾ ಹಿನ್ನೆಲೆ ಆರಂಭವಾಗಲಿಲ್ಲ. ಪರಿಣಾಮ ಆಗಸ್ಟ್‌ನಿಂದ ವಿದ್ಯಾಗಮ ಆರಂಭಿಸಲಾಯಿತು. ಶಾಲೆಯನ್ನೇ ಮಕ್ಕಳ ಬಳಿ ತೆಗೆದುಕೊಂಡು ಹೋಗಲಾಯಿತು. ಅದು ಸಹ ಅ.10 ಕ್ಕೆ ಸ್ಥಗಿತವಾಯಿತು. ಜ. 1 ರಿಂದ ತರಗತಿಯೇ ಆರಂಭಿಸಲಾಯಿತು. ಆದರೆ ಅದು ಕೂಡ ಪೂರ್ಣಾವಧಿ ತರಗತಿ ಆಗಿರಲಿಲ್ಲ. ಜ. 15 ರಿಂದ ಪೂರ್ಣಾವಧಿ ತರಗತಿ ಆರಂಭಿಸಲಾಯಿತು. ಒಟ್ಟು ಪಠ್ಯದ ಪೈಕಿ ಶೇ.30 ರಷ್ಟು ಕಡಿಮೆ ಮಾಡಲಾಯಿತು. ಚಂದನದ ಮೂಲಕ ಅಚ್ಚುಕಟ್ಟಾಗಿ ತರಗತಿ ಸಹ ನಡೆಸಲಾಯಿತು. ಕಳೆದ ವರ್ಷ ಅನುಸರಿಸಿದ ಎಲ್ಲ ಮುಂಜಾಗೃತೆ ಕ್ರಮ ಅನುಸರಿಸಿ ಪರೀಕ್ಷೆ ನಡೆಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net